ಬೆಂಗಳೂರು: ಕೇಂದ್ರ ವಲಯದ ಬಡ್ಡಿ ಸಬ್ಸಿಡಿ ಯೋಜನೆ (ಸಿಎಸ್‌ಐಎಸ್) ಅಡಿ ಪದವಿ, ಸ್ನಾತಕೋತ್ತರ ಪದವಿ ಸೇರಿದಂತೆ ಇತರೆ ಯಾವುದೇ ಸಮಗ್ರ ಶಿಕ್ಷಣ ಕೋರ್ಸ್‌ಗಳ ವಿದ್ಯಾರ್ಥಿಗಳಿಗೆ ಗರಿಷ್ಠ ₹7.5ಲಕ್ಷದ ವರೆಗೆ ಬಡ್ಡಿರಹಿತ ಸಾಲ ಸಿಗಲಿದೆ.
ಈ ಸೌಲಭ್ಯ ಪಡೆಯಲು ಯಾವುದೇ ಪೂರಕ ಭದ್ರತೆ (ಕೊಲ್ಯಾಟರಲ್ ಸೆಕ್ಯುರಿಟಿ) ಒದಗಿಸಬೇಕಾದ ಅಗತ್ಯವೂ ಇಲ್ಲ. ಮೂರನೇ ವ್ಯಕ್ತಿಯ ಭದ್ರತೆ ಒದಗಿಸಬೇಕಾಗಿಯೂ ಇಲ್ಲ.
ಕುಟುಂಬದ ವಾರ್ಷಿಕ ಆದಾಯ ₹4.5 ಲಕ್ಷಕ್ಕಿಂತ ಕಡಿಮೆ ಇರುವ ವಿದ್ಯಾರ್ಥಿಗಳು ಸಾಲ ಪಡೆಯಬಹುದು. ಕಾನೂನು, ಎಂಜಿನಿಯರಿಂಗ್, ನರ್ಸಿಂಗ್, ವೈದ್ಯಕೀಯ, ದಂತ ವೈದ್ಯಕೀಯ ಸೇರಿದಂತೆ ಯಾವುದೇ ಕೋರ್ಸ್ ಮಾತ್ರವಲ್ಲದೆ, ಸಂಶೋಧನಾ ವಿದ್ಯಾರ್ಥಿಗಳೂ ಯೋಜನೆ ಪಡೆಯಲು ಅರ್ಹರು.
ಸಿಗುವ ಸೌಲಭ್ಯ:
ಭದ್ರತೆ ಇಲ್ಲದೆ, ಬಡ್ಡಿರಹಿತವಾಗಿ ಗರಿಷ್ಠ ₹7.5 ಲಕ್ಷದವರೆಗೆ ಸಾಲ. ವಿದ್ಯಾರ್ಥಿಗಳ ವ್ಯಾಸಂಗ ಮಾಡುವ ಕೋರ್ಸ್‌ನ ಅವಧಿ ಮತ್ತು ನಂತರದ ಒಂದು ವರ್ಷ ಅವಧಿಗೆ ಕೇಂದ್ರ ಸರ್ಕಾರವೇ ಬಡ್ಡಿ ಪಾವತಿಸುತ್ತದೆ.
ಅರ್ಜಿ ಸಲ್ಲಿಕೆ ವಿಧಾನ:
ಕೆನರಾ ಬ್ಯಾಂಕ್ ಈ ಯೋಜನೆಯ ನೋಡಲ್ ಬ್ಯಾಂಕ್. ವಿದ್ಯಾರ್ಥಿಗಳು ವ್ಯಾಸಂಗ ಮಾಡುವ ಕೋರ್ಸ್‌ಗೆ ಸಂಬಂಧಿಸಿದ ನಿಯಂತ್ರಣ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಬೇಕು. ಪ್ರಾಧಿಕಾರ ಅಥವಾ ಮಂಡಳಿಗಳು ಈ ಅರ್ಜಿಯನ್ನು ಪುರಸ್ಕರಿಸಿ ಸಂಬಂಧಿಸಿದ ಬ್ಯಾಂಕ್‌ಗಳಿಗೆ ಅರ್ಜಿಗಳನ್ನು ರವಾನಿಸುತ್ತವೆ ಮತ್ತು ವಿದ್ಯಾರ್ಥಿಗಳಿಗೆ ಅನುಮೋದನೆ ಪತ್ರ ನೀಡುತ್ತವೆ.
ಉದಾಹರಣೆಗೆ ಎಲ್‌ಎಲ್‌ಎಂ ವ್ಯಾಸಂಗ ಮಾಡುತ್ತಿರುವವರು ಬಾರ್ ಕೌನ್ಸಿಲ್ ಆಫ್ ಇಂಡಿಯಾಗೆ, ವೈದ್ಯಕೀಯ ಪದವಿ ಅಧ್ಯಯನ ಮಾಡುತ್ತಿರುವವರು ಭಾರತೀಯ ವೈದ್ಯಕೀಯ ಮಂಡಳಿಗೆ ಅರ್ಜಿ ಸಲ್ಲಿಸಿ, ಪ್ರಮಾಣಪತ್ರ ಪಡೆದು, ಕೆನರಾ ಬ್ಯಾಂಕಿನಲ್ಲಿ ಸಾಲಕ್ಕೆ ಅರ್ಜಿ ಕೊಡಬೇಕು.