ಆರೋಗ್ಯ ಕ್ಷೇತ್ರಕ್ಕೆ ₹ 2.23 ಲಕ್ಷ ಕೋಟಿ ಮೀಸಲು: ನಿರ್ಮಲಾ ಸೀತಾರಾಮನ್

ದೆಹಲಿ: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​ ಇಂದು 2021-22ನೇ ಸಾಲಿನ ಬಜೆಟ್​ ಮಂಡನೆ ಮಾಡಿದರು. ಪ್ರಥಮವಾಗಿ ಪ್ರಧಾನಮಂತ್ರಿ ಆತ್ಮನಿರ್ಭರ ಸ್ವಸ್ಥ ಭಾರತ್​ ಯೋಜನೆಯನ್ನು ಉಲ್ಲೇಖಿಸಿದರು. ದೇಶದ ಆರೋಗ್ಯ ಕ್ಷೇತ್ರವನ್ನು ಸುಸ್ಥಿರ ಮಾಡುವ ಸಲುವಾಗಿ ಕೇಂದ್ರ ಸರ್ಕಾರ ಈ ಪ್ರಧಾನಮಂತ್ರಿ ಆತ್ಮನಿರ್ಭರ ಸ್ವಸ್ಥ ಭಾರತ್​ ಯೋಜನೆ ಪ್ರಾರಂಭಿಸಿದ್ದು, ಇದಕ್ಕಾಗಿ ಮುಂದಿನ ಆರುವರ್ಷಗಳನ್ನು ಗಮನದಲ್ಲಿಟ್ಟುಕೊಂಡು 64,180 ಕೋಟಿ ರೂಪಾಯಿ ಅನುದಾನ ಮೀಸಲಿಡಲಾಗಿದೆ ಎಂದು ತಿಳಿಸಿದರು.

ಬಜೆಟ್​ 2021 ಆರು ಸ್ತಂಭಗಳ ಮೇಲೆ ನಿಂತಿದೆ. ಅವುಗಳೆಂದರೆ ಆರೋಗ್ಯ ಮತ್ತು ಯೋಗಕ್ಷೇಮ, ಭೌತಿಕ ಮತ್ತು ಆರ್ಥಿಕ ಬಂಡವಾಳ, ಮೂಲಸೌಕರ್ಯ, ಮಹಾತ್ವಾಕಾಂಕ್ಷಿ ಭಾರತ ನಿರ್ಮಾಣಕ್ಕಾಗಿ ಅಂತರ್ಗತ ಅಭಿವೃದ್ಧಿ, ಮಾನವ ಸಂಪನ್ಮೂಲವನ್ನು ಪುನರುಜ್ಜೀವನಗೊಳಿಸುವುದು, ನಾವೀನ್ಯತೆ ಮತ್ತು ಸಂಶೋಧನೆ-ಅಭಿವೃದ್ಧಿ, ಕನಿಷ್ಠ ಸರ್ಕಾರ-ಗರಿಷ್ಠ ಆಡಳಿತ ಎಂದು ನಿರ್ಮಲಾ ಸೀತಾರಾಮನ್​ ತಿಳಸಿದರು.

ಕೊವಿಡ್​ 19 ಲಸಿಕೆಗೆ 35 ಸಾವಿರ ಕೋಟಿ:
ಕೊವಿಡ್​-19 ಲಸಿಕೆಗಳು ಆತ್ಮನಿರ್ಭರದ ಸಂಕೇತವಾಗಿವೆ. ಇದಕ್ಕೆ 35 ಸಾವಿರ ಕೋಟಿ ರೂ. ನೀಡಲಾಗಿದೆ. 9 ಬಯೋಸೇಫ್ಟಿ ಲ್ಯಾಬ್​ಗಳನ್ನು ಸ್ಥಾಪನೆ ಮಾಡಲಾಗಿದೆ. ಹಾಗೇ ನಗರ ಸ್ವಚ್ಛ ಭಾರತ್​ ಯೋಜನೆಗೆ ಮುಂಬರುವ ಐದು ವರ್ಷಗಳನ್ನು ಗಮನದಲ್ಲಿಟ್ಟುಕೊಂಡು 1,41,670 ಕೋಟಿ ರೂಪಾಯಿ ಅನುದಾನ ಮೀಸಲಿಡಲಾಗಿದೆ. ಆರೋಗ್ಯ ಕ್ಷೇತ್ರಕ್ಕೆ ಒಟ್ಟಾರೆ 2.23 ಲಕ್ಷ ಕೋಟಿ ರೂ. ಮೀಸಲಿಡಲಾಗಿದೆ ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದರು.