ಬೆಂಗಳೂರು: ವಿಧಾನ ಪರಿಷತ್ ಚುನಾವಣೆಗೆ (MLC Election) ಬಿಜೆಪಿ ಅಭ್ಯರ್ಥಿಗಳನ್ನು ಘೋಷಿಸಿದ ಬೆನ್ನಲ್ಲೇ ಕಾಂಗ್ರೆಸ್ ತನ್ನ 8 ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ನಾಮಪತ್ರ ಸಲ್ಲಿಕೆಗೆ ನಾಳೆ (ಮೇ 3) ಕಡೆ ದಿನವಾಗಿರುವುದರಿಂದ ಅಭ್ಯರ್ಥಿಗಳನ್ನು ಘೋಷಿಸಿದ್ದು, ಮಾಜಿ ಶಾಸಕ ಯತೀಂದ್ರ ಸಿದ್ದರಾಮಯ್ಯ, ಹಾಲಿ ಸಚಿವ ಎನ್.ಎಸ್.ಭೋಸರಾಜು ಸೇರಿ 8 ಮಂದಿಗೆ ಟಿಕೆಟ್ ನೀಡಲಾಗಿದೆ.
ಜೂನ್ 13ರಂದು ನಡೆಯುವ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿಯಲ್ಲಿ ಎನ್. ಎಸ್. ಬೋಸರಾಜು, ವಸಂತ ಕುಮಾರ್, ಯತೀಂದ್ರ ಸಿದ್ದರಾಮಯ್ಯ, ಕೆ.ಗೋವಿಂದರಾಜು, ಐವನ್ ಡಿಸೋಜಾ, ಬಿಲ್ಕಿಸ್ ಬಾನೋ, ಜಗದೇವ ಗುತ್ತೇದಾರ್ ಸೇರಿ ಏಳು ಅಭ್ಯರ್ಥಿಗಳು ಇದ್ದಾರೆ. ಹಾಗೆಯೇ ಜಗದೀಶ್ ಶೆಟ್ಟರ್ ಅವರಿಂದ ತೆರವಾದ ಸ್ಥಾನಕ್ಕೆ ನಡೆಯುವ ಉಪಚುನಾವಣೆಗೆ ಬಸನಗೌಡ ಬಾದರ್ಲಿ ಅವರಿಗೆ ಟಿಕೆಟ್ ನೀಡಲಾಗಿದೆ.
ವಿಧಾನಸಭೆಯಿಂದ ವಿಧಾನಪರಿಷತ್ನ 11 ಸ್ಥಾನಗಳಿಗೆ ಜೂನ್ 13ರಂದು ಮತದಾನ ನಡೆಯಲಿದೆ. ಸಂಖ್ಯಾಬಲದ ಆಧಾರದಲ್ಲಿ ಕಾಂಗ್ರೆಸ್ ಗೆಲ್ಲಬಹುದಾದ ಏಳು ಸ್ಥಾನಗಳಿಗೆ ನೂರಾರು ಮಂದಿ ಆಕಾಂಕ್ಷಿಗಳು ಇದ್ದರು. ಕಾಂಗ್ರೆಸ್ಗೆ ಲಭಿಸುವ ಏಳು ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುವುದು ಕಗ್ಗಂಟಾದ ಹಿನ್ನೆಲೆಯಲ್ಲಿ ಶಾರ್ಟ್ ಲಿಸ್ಟ್ ಮಾಡಿಕೊಂಡು ಸಿಎಂ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಅವರು ದೆಹಲಿಗೆ ತೆರಳಿ, ಹೈ ಕಮಾಂಡ್ ನಾಯಕರೊಂದಿಗೆ ಚರ್ಚಿಸಿದ್ದರು. ಇದೀಗ ಕಾಂಗ್ರೆಸ್ ಹೈಕಮಾಂಡ್ 7 ಅಭ್ಯರ್ಥಿಗಳನ್ನು ಫೈನಲ್ ಮಾಡಿದೆ.