ನ್ಯೂಯಾರ್ಕ್: ಐಸಿಸಿ ಟಿ20 ವಿಶ್ವಕಪ್ ನ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ತಂಡಗಳು ನ್ಯೂಯಾರ್ಕ್ ನ ನಸ್ಸೌ ಸ್ಟೇಡಿಯಂನಲ್ಲಿ ರವಿವಾರ ಮುಖಾಮುಖಿಯಾಗಿ, ಲೋ ಸ್ಕೋರಿಂಗ್ ಪಂದ್ಯದಲ್ಲಿ ರೋಹಿತ್ ಶರ್ಮಾ ಟೀಮ್ ಆರು ರನ್ ಅಂತರದಲ್ಲಿ ಗೆಲುವು ಸಾಧಿಸಿದೆ.
ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡವು 19 ಓವರ್ ಗಳಲ್ಲಿ 119 ರನ್ ಗೆ ಆಲೌಟಾದರು. ಗುರಿ ಬೆನ್ನತ್ತಿದ ಪಾಕಿಸ್ತಾನ ತಂಡವು 113 ರನ್ ಮಾತ್ರ ಗಳಿಸಲು ಶಕ್ತವಾಯಿತು. ಕೊನೆಯ ಓವರ್ ನಲ್ಲಿ ನಸೀಂ ಶಾ ಪ್ರಯತ್ನಪಟ್ಟರಾದರೂ ಪಾಕ್ ತಂಡವನ್ನು ಗೆಲುವಿನ ಗುರಿ ತಲುಪಿಸಲು ಸಾಧ್ಯವಾಗಲಿಲ್ಲ.
ನಸೀಂ ಶಾ ನಾಲ್ಕು ಎಸೆತಗಳಲ್ಲಿ ಹತ್ತು ರನ್ ಗಳಿಸಿ ಅಜೇಯರಾಗಿ ಉಳಿದರು. ಸತತ ಎರಡು ಪಂದ್ಯಗಳಲ್ಲಿ ಸೋಲು ಕಂಡ ಬಳಿಕ ಡಗೌಟ್ ಕಡೆ ಬರುತ್ತಿದ್ದ ನಸೀಂ ಶಾ ಬೇಸರ ತಡೆಯಲಾರದೆ ಬಿಕ್ಕಿ ಅತ್ತರು. ಸಹ ಆಟಗಾರ ಶಾಹೀನ್ ಅಫ್ರಿದಿ ಅವರು ನಸೀಂ ಅವರಿಗೆ ಸಂತೈಸಿದರು.
ಭಾರತ ತಂಡದ ನಾಯಕ ರೋಹಿತ್ ಶರ್ಮಾ ಅವರು ಕೂಡಾ ಅಳುತ್ತಿದ್ದ ನಸೀಂ ಶಾ ಅವರನ್ನು ಸಂತೈಸುವುದು ಕಂಡು ಬಂತು.
ಪಂದ್ಯದ ಬಳಿಕ ಮಾತನಾಡಿದ ಪಾಕ್ ನಾಯಕ ಬಾಬರ್ ಅಜಂ ಅವರು ತಂಡದ ಬ್ಯಾಟರ್ ಗಳನ್ನು ಸೋಲಿಗೆ ಹೊಣೆ ಮಾಡಿದರು. “ನಾವು ಉತ್ತಮವಾಗಿ ಬೌಲಿಂಗ್ ಮಾಡಿದೆವು. ಆದರೆ ಬ್ಯಾಟಿಂಗ್ ವೇಳೆ ಸತತ ವಿಕೆಟ್ ಕಳೆದುಕೊಂಡೆವು. ಸರಳವಾಗಿ ಆಡಬೇಕಿತ್ತು. ತಪ್ಪುಗಳ ಬಗ್ಗೆ ಕುಳಿತು ಮಾತನಾಡುತ್ತೇವೆ” ಎಂದರು.