ಜಾತಿಗಣತಿ ವರದಿ ಓದದೇ ವಿರೋಧ ಮಾಡಬೇಡಿ: ಕೆ. ಜಯಪ್ರಕಾಶ್ ಹೆಗ್ಡೆ

ಉಡುಪಿ: ಜಾತಿಗಣತಿ ವರದಿ ಓದದೇ ವಿರೋಧ ಮಾಡಬೇಡಿ. ವರದಿ ಓದಿದ ಬಳಿಕ ಬದಲಾವಣೆಗಳಿದ್ದರೆ ಸೂಚಿಸಿ ಎಂದು ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಕೆ. ಜಯಪ್ರಕಾಶ್ ಹೆಗ್ಡೆ ಹೇಳಿದ್ದಾರೆ.ಜಾತಿಗಣತಿ ವರದಿ ಜಾರಿ ವಿಚಾರದ ಕುರಿತು ಉಡುಪಿಯಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಫೆಬ್ರವರಿ 29ಕ್ಕೆ ಅಧ್ಯಕ್ಷನಾಗಿ ನನ್ನ ಅವಧಿಯ ಕೊನೆಯ ದಿನವಾಗಿತ್ತು. ಅದೇ ದಿನ ಮುಖ್ಯಮಂತ್ರಿಗಳಿಗೆ ವರದಿ ಹಸ್ತಾಂತರಿಸಿದ್ದೇನೆ. ವರದಿ ಬಹಿರಂಗ ಮಾಡುವಂತೆ ಇಷ್ಟರವರೆಗೆ ನಾವು ಒತ್ತಡ ಹಾಕುತ್ತಿದ್ದೆವು. ಈಗ ಹಿಂದುಳಿದ ವರ್ಗದವರು ಒತ್ತಡ ಹಾಕುತ್ತಿದ್ದಾರೆ. ಮೊನ್ನೆ ಮುಖ್ಯಮಂತ್ರಿಗಳು ಸಭೆ ಕರೆದಿದ್ದರು. ನಾನು ಅದರಲ್ಲಿ ಭಾಗವಹಿಸಿದ್ದೆ ಎಂದರು.ಕಾಂತರಾಜ್‌ ಸಮೀಕ್ಷೆಯನ್ನು ಹಿಂದಿನ ಸರಕಾರಗಳು ಒಪ್ಪಿಲ್ಲ ಎಂದ ಅವರು, ನಾನು ತಯಾರಿಸಿದ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದ್ದೇನೆ. ಈ ವರದಿಯನ್ನು 18ನೇ ತಾರೀಕಿಗೆ ಕ್ಯಾಬಿನೆಟ್‌ನಲ್ಲಿ ಇರಿಸುವುದಾಗಿ ಮುಖ್ಯಮಂತ್ರಿ ಹೇಳಿದ್ದಾರೆ. ಇದಕ್ಕಿಂತ ಖುಷಿಯ ವಿಚಾರ ಬೇರೆ ಇಲ್ಲ. ನಮ್ಮ ಒಂದು ವರದಿ ಕ್ಯಾಬಿನೆಟ್ ಮುಂದೆ ಹೋಗುತ್ತಿರುವುದು ಸಂತೋಷ. ಇದೊಂದು ಶಾಶ್ವತ ದಾಖಲೆಯಾಗಿ ಉಳಿಯಲಿದೆ. ಆದಷ್ಟು ಬೇಗ ಕ್ಯಾಬಿನೆಟ್‌ನಲ್ಲಿ ಇಟ್ಟು ಚರ್ಚಿಸಿ ಅಥವಾ ಸಬ್ ಕಮಿಟಿ ಮೂಲಕ ಚರ್ಚೆಗೆ ಕೊಡಬಹುದು ಎಂದು ಹೇಳಿದರು.ವರದಿಗೆ ಕಾಂಗ್ರೆಸ್ ಪಕ್ಷದ ಕೆಲ ನಾಯಕರ ವಿರೋಧ ವಿಚಾರವಾಗಿ ಮಾತನಾಡಿದ ಅವರು, ಕ್ಯಾಬಿನೆಟ್ ನಲ್ಲಿ ಚರ್ಚೆ ಆಗುವಾಗ ಎಲ್ಲಾ ನಾಯಕರಿಗೂ ವಿಷಯ ತಿಳಿಯಲಿದೆ. ಸ್ವತಃ ಮುಖ್ಯಮಂತ್ರಿಗಳೇ ವರದಿಯನ್ನು ಓದಿಲ್ಲ ಎಂದು ಹೇಳಿದ್ದಾರೆ. ಬಿಜೆಪಿಯವರು ವರದಿ ಒಪ್ಪಿರುವುದು ಉತ್ತಮ ಬೆಳವಣಿಗೆ. ಆ‌ರ್.ಅಶೋಕ್ ಕೂಡ ಹೇಳಿಕೆ ಕೊಟ್ಟಿದ್ದಾರೆ. ಮುಖ್ಯಮಂತ್ರಿಗಳು ಕೂಡ ಅಶೋಕ್ ಹೇಳಿಕೆಯಿಂದ ನಿರಾಳವಾಗಿದೆ ಎಂದು ಹೇಳಿದ್ದಾರೆ ಎಂದು ಹೆಗ್ಡೆ ತಿಳಿಸಿದರು.