ಕುಂದಾಪುರ: ಕೊಂಕಣ್ ಸ್ಪೋರ್ಟ್ಸ್ ಹಾಗೂ ಕಲ್ಚರಲ್ ಅಸೋಸಿಯೇಷನ್ (ರಿ) ಕೋಟೇಶ್ವರದ ವತಿಯಿಂದ ಜಿಎಸ್ಬಿ ಸಮಾಜ ಬಾಂಧವರಿಗೆ 40 ಗಜಗಳ ಕ್ರಿಕೆಟ್ ಪಂದ್ಯಾಟ ರೋಯ್ಸ್ ಯುಪಿವಿಸಿ ಡೋರ್ಸ್ & ವಿಂಡೋಸ್ ಕೊಂಕಣ್ ಎಕ್ಸಪ್ರೆಸ್ ಪ್ರೀಮಿಯರ್ ಲೀಗ್ 2024 ಕೋಟೇಶ್ವರ ಕೆಪಿಎಸ್ ಶಾಲಾ ಮೈದಾನದಲ್ಲಿ ಇಂದು ಆರಂಭಗೊಂಡಿತು.
ಎರಡು ದಿನಗಳ ಈ ಕ್ರಿಕೆಟ್ ಪಂದ್ಯಕೂಟದಲ್ಲಿ ಉಭಯ ಜಿಲ್ಲೆಗಳ 12 ತಂಡಗಳಲ್ಲಿ 120 ಆಟಗಾರರು ಲೀಗ್ ಮಾದರಿಯ ಪಂದ್ಯಾಟದಲ್ಲಿ ಆಡಲಿದ್ದಾರೆ.
ದೀಪ ಪ್ರಜ್ವಲನೆಯೊಂದಿಗೆ ನಡೆದ ಸರಳ ಉದ್ಘಾಟನಾ ಸಮಾರಂಭದಲ್ಲಿ ಬಸ್ರೂರು ಶ್ರೀ ಕಾಶೀ ಮಠ ವ್ಯವಸ್ಥಾಪಕ ಸಮಿತಿಯ ಅಧ್ಯಕ್ಷರಾದ ಶ್ರೀಧರ ವಿಠ್ಠಲ್ ಕಾಮತ್ ಮಾತನಾಡುತ್ತಾ ಇಂತಹ ಪಂದ್ಯಕೂಟದಿಂದ ಸಮಾಜದ ಯುವಜನಾಂಗ ಭಾಗವಹಿಸುವಿಕೆಯಿಂದ ಅನ್ಯೋನ್ಯತೆ ಬೆಳೆದು ಸದೃಢ ಸಮಾಜ ನಿರ್ಮಾಣವಾಗಲು ಸಹಕಾರಿಯಾಗಲಿದೆ ಎಂದರು.
ರೋಯ್ಸ್ ಯುಪಿವಿಸಿ ಡೋರ್ಸ್ & ವಿಂಡೋಸ್ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಜೇಂದ್ರ ಡಿ ಕಾಮತ್ ಮಾತನಾಡುತ್ತಾ ಇಂದಿನ ಕಾಲದಲ್ಲಿ ಯುವಜನರು ಮೊಬೈಲ್ ಹಾಗೂ ಇನ್ನಿತರ ಉಪಕರಣಗಳೊಂದಿಗೆ ಕಾಲ ಕಳೆಯುತ್ತಾರೆ. ಇಂತಹ ಹೊರಾಂಗಣ ಕ್ರೀಡಾಕೂಟದ ದೈಹಿಕ ಆಟಗಳಿಂದ ಮಾನಸಿಕ ಖಿನ್ನತೆಯಿಂದ ದೂರವಿರಬಹುದು. ಅಲ್ಲದೇ ನಾಯಕತ್ವ ಗುಣಗಳನ್ನು ಬೆಳೆಸಲು ಇದು ಸಹಕಾರಿಯಾಗಲಿದೆ ಎಂದರು.
ಮಂಗಳೂರು ಶ್ರೀ ವೆಂಕಟರಮಣ ದೇವಸ್ಥಾನದ ಟ್ರಸ್ಟಿ ಕಿರಣ್ ಎಂ ಪೈ ಪಂದ್ಯಾಟದ ಕುರಿತು ಪ್ರಶಂಸನಿಯ ಮಾತುಗಳನಾಡುತ್ತಾ ಶುಭಹಾರೈಸಿದರು.
ಕೋಟೇಶ್ವರ ಶ್ರೀ ಪಟ್ಟಾಭಿ ರಾಮಚಂದ್ರ ದೇವಸ್ಥಾನದ ಮೊಕ್ತೇಸರರಾದ ಸಿಎ ಗಿರೀಶ್ ಪೈ, ವಿಠ್ಠಲದಾಸ್ ಭಟ್, ರತ್ನಾಕರ ಕಾಮತ್, ಕಾರ್ಯದರ್ಶಿ ಅಶೋಕ ಕಾಮತ್, ಶ್ರೀ ರಾಮ ಸೇವಾ ಸಂಘದ ಅಧ್ಯಕ್ಷರಾದ ಶಂಕರ ಕಾಮತ್, ಕರ್ನಾಟಕ ಪಬ್ಲಿಕ್ ಸ್ಕೂಲ್ ಮುಖ್ಯೋಪಾಧ್ಯಾಯ ಚಂದ್ರ ನಾಯ್ಕ್, ಉದ್ಯಮಿಗಳಾದ ಆಟಕೆರೆ ವಿಶ್ವನಾಥ ಪೈ, ರಂಗನಾಥ ಭಟ್ ಉಪಸ್ಥಿತರಿದ್ದರು.
ನರೇಶ ಭಟ್ ನಿರೂಪಿಸಿ, ಧನ್ಯವಾದಗಳನ್ನು ಸಮರ್ಪಿಸಿದರು.
ಪರಿಸರ ಕಾಳಜಿಯ ದೃಷ್ಟಿಯಿಂದ ಹಾಗೂ ಪಂದ್ಯಾಟದ ಸವಿನೆನಪಿಗಾಗಿ 6 ಗಿಡಗಳನ್ನು ತಂಡದ ಮಾಲೀಕರಿಂದ ನೆಡಲಾಯಿತು. ಮುಂದಿನ ದಿನಗಳಲ್ಲಿ ಈ ಗಿಡದ ಸಂಪೂರ್ಣ ನಿರ್ವಹಣೆ ಪಂದ್ಯಾಟದ ಆಯೋಜಕರು ವಹಿಸಿಕೊಂಡಿದ್ದಾರೆ.
ಮೇ12 ರಂದು ನಡೆಯುವ ಪೈನಲ್ ಪಂದ್ಯಾಟದಲ್ಲಿ ವಿಜೇತ ತಂಡಕ್ಕೆ ರೂಪಾಯಿ ₹44,000 ನಗದು ಬಹುಮಾನ ಹಾಗೂ ಶಾಶ್ವತ ಫಲಕ, ದ್ವಿತೀಯ ತಂಡಕ್ಕೆ ರೂಪಾಯಿ ₹25000 ಹಾಗೂ ಶಾಶ್ಚತ ಫಲಕ ಹಾಗೂ ತೃತೀಯ ಹಾಗೂ ಚತುರ್ಥ ತಂಡಕ್ಕೆ ತಲಾ ರೂಪಾಯಿ ₹5000 ಹಾಗೂ ಶಾಶ್ವತ ಫಲಕ ನೀಡಿ ಗೌರವಿಸಲಾಗುವುದು. ಅಲ್ಲದೇ ಪ್ರತಿ ಪಂದ್ಯಾಟದ ಪಂದ್ಯಶ್ರೇಷ್ಟ, ಸರಣಿಯ ಉತ್ತಮ ದಾಂಡಿಗ, ಉತ್ತಮ ಎಸೆತಗಾರ ನೀಡಲಾಗುವುದು. ಸರಣಿ ಶ್ರೇಷ್ಟ ಆಟಗಾರನಿಗೆ ವಿಶೇಷ ಆಕರ್ಷಣೆಯಾಗಿ ಸೈಕಲ್ ನೀಡಲಾಗುವುದು.
ಸಮರೋಪ ಸಮಾರಂಭದಲ್ಲಿ ಕೋಟೇಶ್ವರ ಶ್ರೀ ಪಟ್ಟಾಭಿ ರಾಮಚಂದ್ರ ದೇವಸ್ಥಾನದ ಆಡಳಿತ ಮೊಕ್ತೇಸರ ದಿನೇಶ್ ಗೋವಿಂದ್ರಾಯ ಕಾಮತ್, ಅರವಿಂದ್ರ ಕಾಮತ್, ಸಮಾಜದ ಯವ ನಾಯಕ ನಂದನ್ ಮಲ್ಯ ಭಾಗವಹಿಸಲಿದ್ದಾರೆ.