ಬೆಂಗಳೂರು: ಕೇರಳಕ್ಕೆ ಇಂದು ಮುಂಗಾರು ಮಳೆ ಪ್ರವೇಶಿಸಲಿದೆ. ಮೇ 31 ಅಥವಾ ಜೂ 1ರಂದು ಕರ್ನಾಟಕಕ್ಕೆ ಆಗಮಿಸುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ(ಐಎಂಡಿ) ಮೂನ್ಸೂಚನೆ ಕೊಟ್ಟಿದೆ.
ಅಂಡಮಾನ್ ಮತ್ತು ನಿಕೋಬಾರ್ ದ್ವೀಪದಿಂದ ಮೇ 19ರಿಂದ ಮಾನ್ಸೂನ್ ಆರಂಭವಾಗಿತ್ತು. ಪೂರಕ ವಾತಾವರಣ ಇರುವುದು, ಮಾರುತಗಳು ಪ್ರಬಲವಾಗಿರುವ ಹಿನ್ನೆಲೆಯಲ್ಲಿ ಹಂತ ಹಂತವಾಗಿ ವ್ಯಾಪಿಸಿರುವ ಮಾನ್ಸೂನ್ ಕೇರಳದ ಸಮೀಪದಲ್ಲಿದೆ. ಇಂದು ಕೇರಳದ ಕರಾವಳಿಗೆ ಆಗಮಿಸಲಿದೆ ಎಂದು ಐಎಂಡಿ ಮಾಹಿತಿ ನೀಡಿದೆ.
ಜೂನ್ನಿಂದ ಸೆಪ್ಟೆಂಬರ್ವರೆಗೆ ವಾಡಿಕೆಗಿಂತ ಹೆಚ್ಚು ಮಳೆ ಬೀಳುವ ಸಾಧ್ಯತೆ ಇದೆ. ಕರ್ನಾಟಕದಲ್ಲಿಯೂ ವಾಡಿಕೆಗಿಂತ ತುಸು ಹೆಚ್ಚು ಮಳೆ ಸುರಿಯಲಿದೆ. ಜೂನ್ನಲ್ಲಿ ಭಾರತ ಸೇರಿ ದೇಶಾದ್ಯಂತ ವಾಡಿಕೆಯಷ್ಟೇ ಬೀಳಲಿದೆ ಎಂದರು.
ಜೂ.2 ರಂದು ಭಾರಿ ಮಳೆ:
ರಾಜ್ಯದಲ್ಲಿ ಮುಂದಿನ ೨ ದಿನ ಸಾಧಾರಣ ವರ್ಷಧಾರೆಯಾಗಲಿದೆ ಎಂದು ರಾಜ್ಯ ಹವಾಮಾನ ಇಲಾಖೆ ಮೂನ್ಸೂಚನೆ ಕೊಟ್ಟಿದೆ. ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಧಾರವಾಡ, ಗದಗ, ಹಾವೇರಿ, ಬೆಂಗಳೂರು, ಬೆಂ.ಗ್ರಾಮಾಂತರ, ಚಾಮರಾಜನಗರ, ಚಿಕ್ಕಮಗಳೂರು, ದಾವಣಗೆರೆ, ಹಾಸನ, ಕೊಡಗು, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗದಲ್ಲಿ ಜೂ 1 ರವರೆಗೆ ಸಾಧಾರಣ ಪ್ರಮಾಣದಲ್ಲಿ ಮಳೆ ಬೀಳಲಿದೆ. ರಾಮನಗರ, ಚಾಮರಾಜನಗರದಲ್ಲಿ ಜೂ 2ರಂದು, ಚಿಕ್ಕಮಗಳೂರು, ಕೊಡಗು, ಮೈಸೂರಿನಲ್ಲಿ ಜೂ 3 ರಂದು ಭಾರಿ ಮಳೆ ಬೀಳುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಇಲಾಖೆ ಯೆಲ್ಲೋ ಅರ್ಲಟ್ ಘೋಷಿಸಿದೆ.