ಕುಂದಾಪುರ: ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಉಡುಪಿ ಜಿಲ್ಲೆ ಹಾಗೂ ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜು ಇದರ ಸಹಭಾಗಿತ್ವದಲ್ಲಿ 2024- 25 ನೇ ಶೈಕ್ಷಣಿಕ ಸಾಲಿನ ಕ್ರೀಡಾ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ ಪೂರ್ವಭಾವಿ ಸಮಾಲೋಚನೆ ಸಭೆ ಶ್ರೀ ವೆಂಕಟರಮಣ ಕಾಲೇಜಿನ ಆಡಿಟೋರಿಯಂನಲ್ಲಿ ಆಗಸ್ಟ್ 08 ರಂದು ಜರುಗಿತು.ಶ್ರೀ ವೆಂಕಟರಮಣ ದೇವ್ ಎಜುಕೇಶನಲ್ ಅಂಡ್ ಕಲ್ಚರಲ್ ಟ್ರಸ್ಟ್ ನ ಕಾರ್ಯದರ್ಶಿ ಶ್ರೀ ಕೆ. ರಾಧಾಕೃಷ್ಣ ಶೆಣೈ ಕಾರ್ಯಕ್ರಮವನ್ನು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಉಡುಪಿ ಜಿಲ್ಲಾ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ಶ್ರೀ ಮಾರುತಿಯವರು ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಆಯೋಜನೆಗೊಳ್ಳುವ ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳು ಯಶಸ್ವಿ ಯಾಗಬೇಕಾದರೆ ಎಲ್ಲ ಕಾಲೇಜುಗಳ ಒಗ್ಗಟ್ಟಿನ ಸಹಕಾರ ಅತ್ಯಗತ್ಯ. ಈ ಮೂಲಕ ವಿದ್ಯಾರ್ಥಿಗಳ ಅಮೂಲ್ಯ ಪ್ರತಿಭೆ ಹೊರಹೊಮ್ಮುವಂತಾಗಲಿ ಎಂದು ತಮ್ಮ ಮನದಾಳದ ಮಾತುಗಳನ್ನು ವ್ಯಕ್ತಪಡಿಸಿದರು.
ವೇದಿಕೆಯಲ್ಲಿ ಉಡುಪಿ ಜಿಲ್ಲಾ ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರ ಸಂಘದ ಅಧ್ಯಕ್ಷರಾದ ಶ್ರೀ ವರ್ಗಿಸ್, ಶ್ರೀ ವೆಂಕಟರಮಣ ಕಾಲೇಜಿನ ಪ್ರಾಂಶುಪಾಲರಾದ ಸಂದೀಪ್ ಗಾಣಿಗ, ಅನುದಾನಿತ ಹಾಗೂ ಅನುದಾನ ರಹಿತ ಪದವಿಪೂರ್ವ ಕಾಲೇಜುಗಳ ಪ್ರಾಂಶುಪಾಲರ ಸಂಘದ ಅಧ್ಯಕ್ಷರಾದ ಶ್ರೀ ದಿನೇಶ್. ಎಮ್.ಕೊಡವೂರು, ದೈಹಿಕ ಶಿಕ್ಷಣ ಉಪ್ಯಾಸಕರ ಸಂಘದ ಅಧ್ಯಕ್ಷರಾದ ಶ್ರೀ ಜೀವನ್ ಶೆಟ್ಟಿ, ಉಡುಪಿ ಜಿಲ್ಲಾ ಕ್ರೀಡಾ ಸಂಯೋಜಕರಾದ ಶ್ರೀ ದಿನೇಶ್, ಉಡುಪಿ ಜಿಲ್ಲಾ ಪದವಿ ಪೂರ್ವ ಕಾಲೇಜುಗಳ ಕ್ರೀಡಾ ಕಾರ್ಯದರ್ಶಿ ಜಗದೀಶ್, ಅನುದಾನ ಹಾಗೂ ಅನುದಾನ ರಹಿತ ಪದವಿ ಪೂರ್ವ ಕಾಲೇಜುಗಳ ಕ್ರೀಡಾ ಕಾರ್ಯದರ್ಶಿ ಐವನ್ ಡಿಸೋಜಾ, ಸಾಂಸ್ಕೃತಿಕ ಕಾರ್ಯದರ್ಶಿ ಸುಚೇತಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕ್ರೀಡಾ ಕ್ಷೇತ್ರದಲ್ಲಿ ಉಡುಪಿ ಜಿಲ್ಲೆಯಿಂದ ರಾಷ್ಟ್ರ ಮಟ್ಟವನ್ನು ಪ್ರತಿನಿಧಿಸಿದ ವಿದ್ಯಾರ್ಥಿಗಳನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಸಂದೀಪ್ ಗಾಣಿಗ ಸ್ವಾಗತಿಸಿದರು, ಉಪ ಪ್ರಾಂಶುಪಾಲರಾದ ಸುಜಯ್ ಕೋಟೆಗಾರ್ ವಂದಿಸಿದರು, ಅರ್ಥಶಾಸ್ತ್ರ ಉಪನ್ಯಾಸಕ ಮಂಜುನಾಥ್ ಎಂ. ಕಾರ್ಯಕ್ರಮ ನಿರೂಪಿಸಿದರು.