ಕಾಂಗ್ರೆಸ್ ಕಾರ್ಯಕರ್ತೆಯ ಮೃತದೇಹ ಸೂಟ್‍ಕೇಸ್‍ನಲ್ಲಿ ಪತ್ತೆ!

ರೋಹ್ಟಕ್: ಕಾಂಗ್ರೆಸ್ ಮುಖಂಡ ರಾಹುಲ್‍ಗಾಂಧಿ 2023ರಲ್ಲಿ ನಡೆಸಿದ ಭಾರತ್ ಜೋಡೊ ಯಾತ್ರೆಯಲ್ಲಿ ಪಾಲ್ಗೊಂಡಿದ್ದ 22 ವರ್ಷದ ಕಾಂಗ್ರೆಸ್ ಕಾರ್ಯಕರ್ತೆಯ ಮೃತದೇಹ ಸಂಪ್ಲಾ ಬಸ್ ನಿಲ್ದಾಣ ಬಳಿಯ ಫ್ಲೈಓವರ್ ಪಕ್ಕ ಬಿದ್ದಿದ್ದ ಸೂಟ್‍ಕೇಸ್‍ನಲ್ಲಿ ಶನಿವಾರ ಪತ್ತೆಯಾಗಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಮಹಿಳೆಯ ಕೈಗಳಲ್ಲಿ ಮೆಹಂದಿ ವಿನ್ಯಾಸಗಳಿದ್ದು, ಯಾವುದೋ ಸಮಾರಂಭದಲ್ಲಿ ಭಾಗವಹಿಸಿರಬೇಕು ಎನ್ನುವುದನ್ನು ಇದು ಸೂಚಿಸುತ್ತದೆ.

ಮಹಿಳೆಯನ್ನು ಉಸಿರುಗಟ್ಟಿಸಿ ಸಾಯಿಸಿ ಸೂಟ್‍ಕೇಸ್‍ನಲ್ಲಿ ತುಂಬಿರಬೇಕು ಎಂದು ಪೊಲೀಸರು ಶಂಕಿಸಿದ್ದಾರೆ. ದಾರಿಹೋಕರು ಶವ ಇದ್ದ ಸೂಟ್‍ಕೇಸ್ ಪತ್ತೆ ಮಾಡಿ ಪೊಲೀಸರಿಗೆ ಮಾಹಿತಿ ನೀಡಿದ್ದರು.ಮೃತ ಕಾರ್ಯಕರ್ತೆಯನ್ನು ಹಿಮಾನಿ ನರ್ವಾಲ್ ಎಂದು ರೋಹ್ಟಕ್ ಕಾಂಗ್ರೆಸ್ ಶಾಸಕ ಭರತ್‍ಭೂಷಣ್ ಬಾತ್ರಾ ಗುರುತಿಸಿದ್ದಾರೆ. ಭಾರತ್ ಜೋಡೋ ಯಾತ್ರೆಯಲ್ಲಿ ಈಕೆ ಭಾಗವಹಿಸುವ ಜತೆಗೆ ವಿಧಾನಸಭಾ ಚುನಾವಣೆ ವೇಳೆ ಮಾಜಿ ಸಿಎಂ ಭೂಪೀಂದರ್ ಸಿಂಗ್ ಹೂಡಾ ಅವರಿಗೆ ಸಹಕರಿಸಿದ್ದರು ಎಂದು ಶಾಸಕರು ವಿವರಿಸಿದ್ದಾರೆ. ಮಹಿಳೆ ಮೂಲತಃ ಸೋನಿಪತ್‍ನ ರಿಂಡ್ಹಾನಾದವರಾಗಿದ್ದು, ರೋಹ್ಟಕ್‍ನಲ್ಲಿ ವಾಸವಿದ್ದರು.

ಘಟನೆ ಬಗ್ಗೆ ಸಮಗ್ರ ತನಿಖೆ ನಡೆಸಲು ವಿಶೇಷ ತನಿಖಾ ತಂಡವನ್ನು ರಚಿಸುವಂತೆ ಬಾತ್ರಾ ಆಗ್ರಹಿಸಿದ್ದಾರೆ. ಇದು ಯೋಜಿತ ಕೃತ್ಯ ಇರಬೇಕು ಎಂದು ಪೊಲೀಸರು ಶಂಕಿಸಿದ್ದಾರೆ. ರೋಹ್ಟಕ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮರಣೋತ್ತರ ಪರೀಕ್ಷೆಗಾಗಿ ಶವವನ್ನು ಪಿಜಿಐಎಂಎಸ್‍ಗೆ ಕಳುಹಿಸಲಾಗಿದೆ.ಮಹಿಳೆಯ ಹತ್ಯೆ ತೀವ್ರ ಖೇದಕರ ಮತ್ತು ಆಘಾತಕಾರಿ; ಈ ಬಗ್ಗೆ ನಿಷ್ಪಕ್ಷಪಾತವಾಗಿ ಉನ್ನತ ಮಟ್ಟದ ತನಿಖೆಯಾಗಬೇಕು. ತಪ್ಪಿತಸ್ಥರಿಗೆ ಎಷ್ಟು ಬೇಗ ಸಾಧ್ಯವೋ ಅಷ್ಟುಬೇಗ ಕಠಿಣ ಶಿಕ್ಷೆಯಾಗಬೇಕು. ರಾಜ್ಯದಲ್ಲಿ ಬಹುಶಃ ಜಂಗಲ್‍ರಾಜ್ ಆಡಳಿತವಿದ್ದಂತಿದೆ” ಎಂದು ಹೂಡಾ ಪ್ರತಿಕ್ರಿಯಿಸಿದ್ದಾರೆ.