ಎಲ್ಲಾ ಜಾತಿ, ವರ್ಗದ ಜನರ ಕಷ್ಟ ಕಾರ್ಪಣ್ಯಕ್ಕೆ ಸ್ಪಂದಿಸಿದ ನಾಯಕ ಹರೀಶ್‌ ಪೂಂಜ: ಕೋಟ

ಬೆಳ್ತಂಗಡಿ: ರಾಜ್ಯ ಹಾಗೂ ಕೇಂದ್ರ ಸರಕಾರಗಳ ಪ್ರಮುಖ ಯೋಜನೆಗಳನ್ನು ಹರೀಶ್‌ ಪೂಂಜ ತಾಲೂಕಿನ ಅರ್ಹ ಫಲಾನುಭವಿಗಳಿಗೆ ತಲುಪಿಸಿ ಬೆಳ್ತಂಗಡಿ ಕ್ಷೇತ್ರದ ಪ್ರಗತಿಗೆ ಭಗೀರಥ ಪ್ರಯತ್ನ ಮಾಡಿದ್ದಾರೆ, ಎಲ್ಲಾ ವರ್ಗ, ಎಲ್ಲಾ ಜಾತಿಯ ಜನರ ಕಷ್ಟ ಕಾರ್ಪಣ್ಯಗಳಿಗೆ ಸದಾ ಸ್ಪಂದಿಸಿದವರು ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಅವರು ಪಡಂಗಡಿ, ವೇಣೂರು, ನಾರಾವಿಯಲ್ಲಿ ನಡೆದ ಬೆಳ್ತಂಗಡಿ ಬಿಜೆಪಿ ಅಭ್ಯರ್ಥಿ ಹರೀಶ್‌ ಪೂಂಜ ಪರ ಬಿಜೆಪಿಯ ಸಾರ್ವಜನಿಕ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.

ಅಭಿವೃದ್ಧಿಯ ವಿಚಾರದಲ್ಲಿ ಈ ರಾಜ್ಯ ಕಂಡ ಶ್ರೇಷ್ಠ ಶಾಸಕರಾಗಿರುವ ಹರೀಶ್‌ ಪೂಂಜ ಬೆಳ್ತಂಗಡಿಯಲ್ಲಿ ಹಿಂದೆಂದೂ ಕಂಡಿರದ ರೀತಿಯಲ್ಲಿ ಸುಧಾರಣಾ ಕಾರ್ಯ ನಡೆಸಿದ್ದು ಮತ್ತಷ್ಟು ಅಭಿವೃದ್ಧಿಗಾಗಿ 60 ಸಾವಿರ ದಾಖಲೆ ಮತ ಅಂತರದಿಂದ ಅವರನ್ನು ಮತ್ತೆ ಗೆಲ್ಲಿಸಬೇಕಾಗಿದೆ ಎಂದರು.

75 ವರ್ಷದಲ್ಲಿ ರಾಜಕೀಯ ಮಾಡಿದ ಕಾಂಗ್ರೆಸ್‌ ಅನ್ನು ಇಂದು ಜನರು ನಂಬುತ್ತಿಲ್ಲ. ಚೈನ ಸೆಟ್‌ ರೇಡಿಯೋಗೆ ಹೇಗೆ ಗ್ಯಾರಂಟಿ ಇಲ್ಲವೋ ಅದೇ ರೀತಿ ಕಾಂಗ್ರೆಸ್‌ನ ಗ್ಯಾರಂಟಿ ಕಾರ್ಡಿಗೂ ಕಾಂಗ್ರೆಸ್‌ಗೂ ಗ್ಯಾರಂಟಿ ಇಲ್ಲ. ಯಾರಿಗೂ ಅನುಮಾನ ಬೇಡ ಎಂದು ಕೋಟ ಶ್ರೀನಿವಾಸ ಪೂಜಾರಿ ನುಡಿದರು.

ಈ ವೇಳೆ ಮಾತನಾಡಿದ ಹರೀಶ್‌ ಪೂಂಜ, ಕೈಗೊಂಡ ಅಭಿವೃದ್ಧಿಗಳೇ ನನಗೆ ಶ್ರೀರಕ್ಷೆಯಾಗಲಿದೆ. ತಾಲೂಕಿನ 81 ಗ್ರಾಮಗಳಲ್ಲಿ 5 ವರ್ಷದಲ್ಲಿ ರಾತ್ರಿ ಹಗಲೆನ್ನದೆ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೇನೆ. ರಾಷ್ಟ್ರೀಯತೆ, ಹಿಂದುತ್ವ, ಅಭಿವೃದ್ಧಿ ವಿಚಾರದಲ್ಲಿ ಜನಸೇವೆ ಮಾಡಿದ್ದೇನೆ. ಜನಸೇವೆಗಾಗಿ ಮತ್ತೂಮ್ಮೆ ಅವಕಾಶ ಕಲ್ಪಿಸುವಂತೆ ಮನವಿ ಮಾಡಿದರು.

ಬಿಜೆಪಿ ಬೆಳ್ತಂಗಡಿ ಮಂಡಲ ಅಧ್ಯಕ್ಷ ಅಧ್ಯಕ್ಷ ಜಯಂತ್‌ ಕೋಟ್ಯಾನ್‌ ಮಾತನಾಡಿ, ಹರೀಶ್‌ ಪೂಂಜ ಅವರು ಶಾಸಕರಾದ ನಂತರ ಬೆಳ್ತಂಗಡಿ ಪರಿವರ್ತನೆಯ ಹಾದಿಯಲ್ಲಿ ಮುನ್ನಡೆದಿದೆ. ಎರಡನೇ ಬಾರಿಗೂ ಅವರು ದೊಡ್ಡ ಅಂತರದಿಂದ ಗೆಲುವು ಸಾಧಿಸುತ್ತಾರೆ ಎಂದರು.
ಹಿರಿಯರಾದ ಕುಶಾಲಪ್ಪ ಗೌಡ ಪೂವಾಜೆ, ದೇವೇಂದ್ರ ಹೆಗ್ಡೆ ಕೊಕ್ರಾಡಿ, ಸದಾನಂದ ಪೂಜಾರಿ ಉಂಗಿಲಬೈಲು, ಪ.ಪಂ. ಉಪಾಧ್ಯಕ್ಷ ಜಯಾನಂದ ಗೌಡ, ಸಂತೋಷ್‌ ಕುಮಾರ್‌ ಜೈನ್‌ ಪಡಂಗಡಿ, ಸುಂದರ ಹೆಗ್ಡೆ ವೇಣೂರು, ನೇಮಯ್ಯ ಕುಲಾಲ್‌ ವೇಣೂರು, ಅರುಣ್‌ ಕ್ರಾಸ್ತಾ ವೇಣೂರು, ಸೋಮನಾಥ ಬಂಗೇರ ವರ್ಪಾಳೆ, ಸುಧಾಕರ ಭಂಡಾರಿ ನಾರಾವಿ, ಶ್ರೀನಿವಾಸ ಕಿಣಿ ನಾರಾವಿ, ಡಾಕಯ್ಯ ಪೂಜಾರಿ ನಾರಾವಿ, ನಿರಂಜನ್‌ ಅಜ್ರಿ, ಉದಯ ಹೆಗ್ಡೆ ನಾರಾವಿ, ಆಶಾಲತಾ ನಾರಾವಿ, ಮೋಹನ ಹೆಗ್ಡೆ ಅಂಡಿಂಜೆ, ವಿಜಯ ಗೌಡ ವೇಣೂರು, ಶ್ರೀನಿವಾಸ್‌ ರಾವ್‌ ಧರ್ಮಸ್ಥಳ, ಹಿತೇಶ್‌ ಕಾಪಿನಡ್ಕ, ವಿಶ್ವನಾಥ ಹೊಳ್ಳ ನಾಲ್ಕೂರು, ಸಂತೋಷ್‌ ಶೆಟ್ಟಿ ಹಲ್ಲಂದೋಡಿ, ಅಶೋಕ್‌ ಗೋವಿಯಾಸ್‌ ಪಡಂಗಡಿ, ರಾಜೇಶ್‌ ಆಚಾರ್ಯ ಪಡಂಗಡಿ, ಅನೀಶ್‌ ಪೂಜಾರಿ ವೇಣೂರು, ಮಂಡಲ ಪದಾಧಿಕಾರಿಗಳು, ಸ್ಥಳೀಯ ಜನಪ್ರತಿನಿಧಿಗಳು ಮತ್ತು ಅಪಾರ ಸಂಖ್ಯೆಯಲ್ಲಿ ಕಾರ್ಯಕರ್ತರು, ಅಭಿಮಾನಿಗಳು ಉಪಸ್ಥಿತರಿದ್ದರು.

ನೆರಿಯ, ಕೊಕ್ಕಡ, ಅರಸಿನಮಕ್ಕಿಯ ಹತ್ಯಡ್ಕದಲ್ಲೂ ಪ್ರಚಾರ ಸಭೆ ನಡೆಸಲಾಯಿತು. ಸಾವಿರಾರು ಕಾರ್ಯಕರ್ತರು, ಸ್ಥಳೀಯರು ಭಾಗವಹಿಸಿ ಅಭಿಮಾನ ವ್ಯಕ್ತಪಡಿಸಿದರು.

ಕಾಂಗ್ರೆಸ್‌ನ ಹಿಂದುತ್ವ ಬರಿ ವೋಟಿಗೋಸ್ಕರ

ಬಿಜೆಪಿಗೆ ಹಿಂದುತ್ವದ ವಿಚಾರದಲ್ಲಿ ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಒಂದೇ ಸಿದ್ಧಾಂತ. 45 ವರ್ಷಗಳ ಹೋರಾಟ ಯಶಸ್ವಿಯಾಗಿದ್ದು ರಾಮ ಮಂದಿರ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ಆದರೆ ಕಾಂಗ್ರೆಸ್‌ನ ಹಿಂದುತ್ವ ಬರಿ ವೋಟಿಗೋಸ್ಕರ. ಬೆಳ್ತಂಗಡಿಯಲ್ಲೊಂದು ಹಿಂದುತ್ವ, ಮಂಗಳೂರು, ಕೇರಳ, ದಿಲ್ಲಿಯಲ್ಲಿ ಇನ್ನೊಂದು ಹಿಂದುತ್ವ, ನೈಜವಾದ ಹಿಂದುತ್ವ ನಿಮ್ಮ ಹೃದಯದಲ್ಲಿದ್ದರೆ ನರೇಂದ್ರ ಮೋದಿಯವರ ನೇತೃತ್ವದಲ್ಲಿ ನಿರ್ಮಾಣವಾಗುತ್ತಿರುವ ಅಯೋಧ್ಯೆಯ ರಾಮಮಂದಿರ ನಿರ್ಮಾಣಕ್ಕೆ ಬೆಂಬಲ ಘೋಷಣೆ ಮಾಡಿ ಎಂದು ಶಾಸಕ ಹರೀಶ್‌ ಪೂಂಜ ಅವರು ಕಾಂಗ್ರೆಸ್‌ ನಾಯಕರಿಗೆ ಸವಾಲು ಹಾಕಿದರು.