ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ಜೂ. 7 ಮತ್ತು 8ರಂದು ʼಆಳ್ವಾಸ್ ಪ್ರಗತಿ-2024 ಉದ್ಯೋಗ ಮೇಳ’ ನಡೆಯಲಿದ್ದು, 20 ಸಾವಿರಕ್ಕೂ ಅಧಿಕ ಉದ್ಯೋಗಾಕಾಂಕ್ಷಿಗಳು ಭಾಗವಹಿಸುವ ನಿರೀಕ್ಷೆ ಇದೆ. ಐಟಿ ವಲಯ, ಉತ್ಪಾದನಾ ವಲಯ, ಬಿಎಫ್ಎಸ್ಐ, ಐಟಿಇಎಸ್, ಫಾರ್ಮಾ, ಆರೋಗ್ಯ, ಮಾರಾಟ, ಮಾಧ್ಯಮ, ನಿರ್ಮಾಣ, ಹಾಸ್ಪಿಟಾಲಿಟಿ ವಲಯದ ಕಂಪನಿಗಳು ಭಾಗವಹಿಸಲಿವೆ. ರಾಜ್ಯದವರ ಜತೆಗೆ ಹೊರ ರಾಜ್ಯದವರೂ ಭಾಗವಹಿಸಲಿದ್ದಾರೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಕಳೆದ 13 ಆಳ್ವಾಸ್ ಪ್ರಗತಿ ಹಾಗೂ 7 ಉದ್ಯೋಗ ಮೇಳಗಳಲ್ಲಿ ಒಟ್ಟು 31,896 ಮಂದಿಗೆ ಉದ್ಯೋಗಾವಕಾಶ ನೀಡಲಾಗಿದೆ. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ತನ್ನ ಸಿಎಸ್ಆರ್ ಚಟುವಟಿಕೆಯಡಿ ಉದ್ಯೋಗ ಮೇಳವನ್ನು ಉಚಿತವಾಗಿ ಆಯೋಜಿಸಿದ್ದು, ನೇಮಕಾತಿ ನಡೆಸುವ ಕಂಪನಿಗಳಿಗೆಗೂ ಇದು ಉಚಿತವಾಗಿದೆ. ಈವರೆಗೆ 300ಕ್ಕೂ ಅಧಿಕ ಕಂಪನಿಗಳು ನೋಂದಾಯಿಸಿದ್ದು, 10 ಸಾವಿರಕ್ಕೂ ಅಧಿಕ ಉದ್ಯೋಗಾಕಾಂಕ್ಷಿಗಳು ನೋಂದಣಿ ಮಾಡಿದ್ದಾರೆ. ವೈದ್ಯಕೀಯ ಮತ್ತು ಪ್ಯಾರಾಮೆಡಿಕಲ್, ಎಂಜಿನಿಯರಿಂಗ್, ಕಲೆ, ವಾಣಿಜ್ಯ ಮತ್ತು ನಿರ್ವಹಣೆ, ವಿಜ್ಞಾನ, ನರ್ಸಿಂಗ್ ಜತೆಗೆ ಐಟಿಐ, ಡಿಪ್ಲೊಮಾ, ಪಿಯುಸಿ ಮತ್ತು ಎಸ್ಸೆಸ್ಸೆಲ್ಸಿ ಇತರ ಅರ್ಹ ಪದವೀಧರರು ಹಾಗೂ ಸ್ನಾತಕೋತ್ತರ ಪದವೀಧರರಿಗೆ ಹೆಚ್ಚಿನ ಅವಕಾಶ ಸಿಗಲಿದೆ. ಅಂತಿಮ ಸೆಮಿಸ್ಟರ್ ಪದವಿ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳು, ಅನುಭವಿ ವಿದ್ಯಾರ್ಥಿಗಳೂ ಈ ಅವಕಾಶ ಬಳಸಿಕೊಳ್ಳಬಹುದು ಎಂದು ತಿಳಿಸಿದ್ದಾರೆ.
ಐಟಿ ವಲಯದಲ್ಲಿ 207 ಸಾಫ್ಟ್ವೇರ್ ಎಂಜಿನಿಯರಿಂಗ್ ಹುದ್ದೆ ಸೇರಿದಂತೆ 20 ಕಂಪನಿಗಳಲ್ಲಿ 843 ಉದ್ಯೋಗಾವಕಾಶ ಇದೆ. 400ಕ್ಕೂ ಅಧಿಕ ಉದ್ಯೋಗಾವಕಾಶ ಯಾವುದೇ ಹಿನ್ನೆಲೆಯ ಪದವೀಧರರಿಗೆ ಅಮೆಜಾನ್ ಹಾಗೂ ಟಿಸಿಎಸ್ ಕಂಪನಿಗಳಲ್ಲಿದೆ. ಉತ್ಪಾದನ ವಲಯದಲ್ಲಿ 70 ಸಾವಿರಕ್ಕೂ ಅಧಿಕ ಉದ್ಯೋಗದಾತಾರ 52 ಕಂಪನಿಗಳು ಇವೆ ಎಂದರು.
ಆಳ್ವಾಸ್ ಪ್ರಗತಿಯ ಎರಡು ದಿನಗಳೂ ನೋಂದಣಿ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ದೂರದ ಆಕಾಂಕ್ಷಿಗಳಿಗೆ ಜೂ. 6ರಿಂದ ವಾಸ್ತವ್ಯ ವ್ಯವಸ್ಥೆ ಕಲ್ಪಿಸಲಾಗುವುದು. ಉದ್ಯೋಗಾಕಾಂಕ್ಷಿಗಳ ಉಚಿತ ನೋಂದಣಿಗಾಗಿ: //alvaspragati.com/CandidateRegistrationPageಗೆ ಭೇಟಿ ನೀಡಬಹುದು. ಐಟಿಐ, ಪಿಯುಸಿ ಮತ್ತು ಎಸ್ಸೆಸ್ಸೆಲ್ಸಿ ಮತ್ತು ಅದಕ್ಕಿಂತ ಕಡಿಮೆ ವಿದ್ಯಾರ್ಹತೆಯ ಅಭ್ಯರ್ಥಿಗಳನ್ನು ಹೊರತುಪಡಿಸಿ ಎಲ್ಲರಿಗೂ ನೋಂದಣಿ ಕಡ್ಡಾಯ. ನೋಂದಣಿ ಮತ್ತು ಪಾಲ್ಗೊಳ್ಳುವ ಕಂಪನಿಗಳ ಮಾಹಿತಿ ಹಾಗೂ ವಿವರಕ್ಕಾಗಿ www.alvaspragati.com ಭೇಟಿ ನೀಡಬಹುದು ಎಂದು ಡಾ.ಮೋಹನ ಆಳ್ವ ತಿಳಿಸಿದ್ದಾರೆ.