ಮೈತ್ರಿ ಅಭ್ಯರ್ಥಿಗಳ ಗೆಲುವು ಖಚಿತ: ಬಿಜೆಪಿ ರಾಜ್ಯಾಧ್ಯಕ್ಷರಾದ ಬಿ.ವೈ.ವಿಜಯೇಂದ್ರ ವಿಶ್ವಾಸ.

ಶಿಕಾರಿಪುರ: ಮೈತ್ರಿಯೊಂದಿಗೆ ಬಿಜೆಪಿ ಅಭ್ಯರ್ಥಿಯಾಗಿ ನೈರುತ್ಯ ಪದವೀಧರ ಕ್ಷೇತ್ರದಿಂದ ಡಾ.ಧನಂಜಯ ಸರ್ಜಿ ಹಾಗೂ ಶಿಕ್ಷಕರ ಕ್ಷೇತ್ರದಿಂದ ಜೆಡಿಎಸ್ ಎಸ್.ಎಲ್.ಭೋಜೇಗೌಡ್ರು ಸ್ಪರ್ಧೆ ಮಾಡಿದ್ದು, ವಾತಾವರಣ ಮೈತ್ರಿ ಅಭ್ಯರ್ಥಿಗಳ ಪರವಾಗಿದ್ದು, ಇಬ್ಬರ ಗೆಲುವು ಖಚಿತ ಎಂದು ಬಿಜೆಪಿ ರಾಜ್ಯಾಧ್ಯಕ್ಷರಾದ ಬಿ.ವೈ.ವಿಜಯೇಂದ್ರ ಹೇಳಿದರು.

ಇಲ್ಲಿನ ತಾಲ್ಲೂಕು ಬಿಜೆಪಿ ಕಛೇರಿಯಲ್ಲಿ ಬುಧವಾರ ಬೆಳಗ್ಗೆ ಅವರು ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ, ಜೆಡಿಎಸ್ ಮೈತ್ರಿಯೊಂದಿಗೆ ನಾಲ್ಕು ಕ್ಷೇತ್ರಗಳಲ್ಲಿ ಬಿಜೆಪಿ ಹಾಗೂ ಇನ್ನೆರಡು ಕ್ಷೇತ್ರಗಳಲ್ಲಿ ಜೆಡಿಎಸ್ ಸ್ಪರ್ಧೆ ಮಾಡುತ್ತಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಹೊಂದಾಣಿಕೆಯಂತೆ ಈ ಚುನಾವಣೆಯಲ್ಲಿಯೂ ಮೈತ್ರಿಯೊಂದಿಗೆ ಚುನಾವಣೆ ಮಾಡಲಾಗುತ್ತಿದೆ. ಈ ಚುನಾವಣೆಯನ್ನು ಎರಡೂ ಪಕ್ಷಗಳೂ ಬಹಳ ಗಂಭೀರವಾಗಿ ಪರಿಗಣಿಸಿವೆ ಎಂದರು.

ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 15 ರಿಂದ 20 ಸ್ಥಾನ ಗೆಲ್ಲುತ್ತೇವೆಂಬ ಭ್ರಮೆಯಲ್ಲಿತ್ತು, ಇದೀಗ ಅವರ ನಿರೀಕ್ಷೆ, ಉತ್ಸಾಹ ಕಡಿಮೆಯಾಗುತ್ತಿದೆ. ಜೂನ್ 4 ರಂದು ಹೆಚ್ಚಿನ ಸೀಟು ಗೆಲ್ಲುವ ಮೂಲಕ ಬಿಜೆಪಿ ವಿಜಯೋತ್ಸವ ಆಚರಿಸಲಿದೆ. ಮಾನ್ಯ ಪ್ರಧಾನಿ ನರೇಂದ್ರ ಮೋದಿ ಜೀ ಅವರು ಮತ್ತೊಮ್ಮೆ ಪ್ರಧಾನ ಮಂತ್ರಿ ಆಗುವುದನ್ನು ತಡೆಯಲು ಸಾಧ್ಯವಿಲ್ಲ, ಫಲಿತಾಂಶ ಬಂದ ನಂತರ ಕಾಂಗ್ರೆಸ್ ಗೆ ಜ್ಞಾನೋದಯ ಆಗಲಿದೆ. ರಾಜ್ಯದಲ್ಲಿ ಆಡಳಿತ ಯಂತ್ರ ಕುಸಿದಿದ್ದು, ಸಾಧನೆ ಶೂನ್ಯವಾಗಿದೆ. ಯಾವುದೇ ಗುದ್ದಲಿ, ಪೂಜೆ, ಶಂಕುಸ್ಥಾಪನೆಗಳು ನಡೆದಿಲ್ಲ, ಹೊಸ ಯೋಜನೆ ಜಾರಿ ಮಾಡಿಲ್ಲ ಎಂದು ಆಪಾದಿಸಿದರು.

ನೈರುತ್ಯ ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಧನಂಜಯ ಸರ್ಜಿ ಮಾತನಾಡಿ, ಈಗಾಗಲೇ ಮಂಗಳೂರು, ಕೊಡಗು, ಉಡುಪಿ, ದಕ್ಷಿಣ ಕನ್ನಡ, ಚಿಕ್ಕಮಗಳೂರು ಹಾಗೂ ದಾವಣಗೆರೆ ಭಾಗದಲ್ಲಿ ಪ್ರವಾಸ ಮಾಡಿದ್ದೇವೆ, ಪೂರಕವಾದ ವಾತಾವರಣ ಇದ್ದು, ಗೆಲ್ಲುವುದು ಖಚಿತ, ಪದವೀಧರರ ಧ್ವನಿಯಾಗಿ ಸೇವೆ ಸಲ್ಲಿಸುತ್ತೇನೆ ಎಂದರು.

ಗೋಷ್ಟಿಯಲ್ಲಿ ನೈರುತ್ಯ ಪದವೀಧರ ಕ್ಷೇತ್ರದ ಅಭ್ಯರ್ಥಿ ಡಾ.ಧನಂಜಯ ಸರ್ಜಿ, ಎಂಎಡಿಬಿ ಮಾಜಿ ಅಧ್ಯಕ್ಷ ಗುರುಮೂರ್ತಿ, ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಬಿ.ಡಿ.ಭೂಕಾಂತ್, ನಿರ್ದೇಶಕರಾದ ಚನ್ನವೀರಪ್ಪ, ಪುರಸಭಾ ಸದಸ್ಯ ಕೆ.ಪಾಲಾಕ್ಷಪ್ಪ, ತಾಲ್ಲೂಕು ಬಿಜೆಪಿ ಅಧ್ಯಕ್ಷ ಸಂಕ್ಲಾಪುರ ಹನುಮಂತಪ್ಪ, ಜಿಲ್ಲಾ ವಾಲ್ಮೀಕಿ ಸಂಘದ ಅಧ್ಯಕ್ಷ ಎಚ್.ಟಿ.ಬಳಿಗಾರ್ ಮತ್ತಿತರ ಮುಖಂಡರು ಹಾಜರಿದ್ದರು.