ಮುನಿಯಾಲು ಉದಯ ಶೆಟ್ಟಿಯವರ ತೇಜೋವಧೆಗೆ ಬಿಜೆಪಿ ವ್ಯರ್ಥ ಪ್ರಯತ್ನ – ಕಾರ್ಕಳ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೃಷ್ಣ ಶೆಟ್ಟಿ ಬಜಗೋಳಿ ಖಂಡನೆ.

ಕಾರ್ಕಳ ಕ್ಷೇತ್ರದಲ್ಲಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕೂದಲೆಳೆಯ ಅಂತರದಲ್ಲಿ ಗೆಲುವು ಸಾಧಿಸಿದ್ದ ಬಿಜೆಪಿಯು ಈ ಕ್ಷೇತ್ರದ ಜನಾಕ್ರೋಶಕ್ಕೆ ತುತ್ತಾಗಿದ್ದು, ಏಪ್ರಿಲ್ 26 ರಂದು ನಡೆಯಲಿರುವ ಲೋಕಸಭಾ ಚುನಾವಣೆಗೆ ಜನರ ಗಮನವನ್ನು ಬೇರೆಡೆ ಸೆಳೆಯಲು ಕಾರ್ಕಳ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಮುನಿಯಾಲು ಉದಯ ಶೆಟ್ಟಿ ಅವರ ಮೇಲೆ ಸುಳ್ಳು ದೂರು ದಾಖಲು ಮಾಡಿರುವುದು ಕಾರ್ಕಳ ಬಿಜೆಪಿಗರ ಹತಾಶೆಯ ಪ್ರತೀಕವಾಗಿದೆ.

ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆಯವರ ಗೆಲುವಿಗಾಗಿ ಹಗಲಿರುಳು ಶ್ರಮಿಸುತ್ತಿರುವ ಉದಯ ಶೆಟ್ಟಿಯವರ ತೇಜೊವಧೆಗೆ ಬಿಜೆಪಿಯವರು ವ್ಯರ್ಥ ಪ್ರಯತ್ನ ಪಡುತ್ತಿದ್ದಾರೆ.

ಬಡವರಿಗಾಗಿ, ಯುವಕರಿಗಾಗಿ, ಮಹಿಳೆಯರಿಗಾಗಿ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗೆ ಆರಂಭದಿಂದಲೂ ವಿರೋಧ ವ್ಯಕ್ತಪಡಿಸಿದ್ದ ಬಿಜೆಪಿಯು ಲೋಕಸಭಾ ಚುನಾವಣೆ ಫಲಿತಾಂಶದ ನಂತರ ಗ್ಯಾರಂಟಿ ಯೋಜನೆ ರದ್ದಾಗುತ್ತದೆ ಎಂದು ಅಪಪ್ರಚಾರ ಮಾಡಿರುವ ಬಗ್ಗೆ ಬೇಸರ ವ್ಯಕ್ತಪಡಿಸಿದ ಹೇಳಿಕೆಗಳನ್ನು ತಿರುಚಿ ಮುನಿಯಾಲು ಉದಯ ಶೆಟ್ಟಿ ಅವರ ಮೇಲೆ ಸುಳ್ಳು ಆರೋಪ ಹೊರಿಸಿ ದೂರು ದಾಖಲು ಮಾಡಿದ್ದು ಖಂಡನೀಯ.

ಕಾರ್ಕಳದ ಕೊಡುಗೈ ದಾನಿ, ಹಲವಾರು ದೇವಸ್ಥಾನ, ದೈವಸ್ಥಾನಗಳ ನವೀಕರಣ ಹಾಗೂ ಕಾರ್ಯಕ್ರಮಗಳಿಗೆ ತನ್ನಿಂದಾದ ಆರ್ಥಿಕ ಶಕ್ತಿ ನೀಡುತ್ತಾ, ದೀನ ದಲಿತರ ಹಾಗೂ ಬಡವರ ಏಳಿಗೆ ಬಗ್ಗೆ ಸದಾ ಮಿಡಿಯುವ ಸಜ್ಜನ ರಾಜಕಾರಣಿಯಾಗಿ ಗುರುತಿಸಿಕೊಂಡಿರುವ ಉದಯ ಶೆಟ್ಟಿ ಅವರ ಹೇಳಿಕೆಯನ್ನು ತಿರುಚಿರುವ ಬಿಜೆಪಿಗರಿಗೆ ತಕ್ಕ ಉತ್ತರವನ್ನು ಕಾರ್ಕಳ ಕ್ಷೇತ್ರದ ಪ್ರಜ್ಞಾವಂತ ಜನತೆ ಖಂಡಿತವಾಗಿಯೂ ಈ ಚುನಾವಣೆಯಲ್ಲಿ ನೀಡಲಿದ್ದಾರೆ ಎನ್ನುವ ವಿಶ್ವಾಸವಿದೆ ಎಂದು ಕಾರ್ಕಳ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ ಕೃಷ್ಣ ಶೆಟ್ಟಿ ಬಜಗೋಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.