ಉಡುಪಿ: 2026ರ ಜ.18ರಂದು ನಡೆಯಲಿರುವ ಶೀರೂರು ಮಠದ ಪರ್ಯಾಯದ ಪೂರ್ವಭಾವಿಯಾಗಿ ನಡೆಯುವ ಮುಹೂರ್ತಗಳಲ್ಲಿ ಎರಡನೇಯದಾದ ಅಕ್ಕಿ ಮುಹೂರ್ತ ಇದೇ ಮಾ.6ರ ಬೆಳಗ್ಗೆ 11:10ಕ್ಕೆ ಶೀರೂರು ಮಠದಲ್ಲಿ ನಡೆಯಲಿದೆ ಎಂದು ಶೀರೂರು ಮಠಾಧೀಶರಾದ ಶ್ರೀವೇದವರ್ಧನತೀರ್ಥ ಶ್ರೀಪಾದರು ತಿಳಿಸಿದ್ದಾರೆ.
ಶೀರೂರು ಮಠದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪರ್ಯಾಯದ ಎರಡು ವರ್ಷಗಳ ಅವಧಿಗೆ (2026ರ ಜ.18ರಿಂದ 2028ರ ಜ.17ರವರೆಗೆ) ಅನ್ನದಾನಕ್ಕೆ ಅಗತ್ಯವಿರುವ ಅಕ್ಕಿ ಸಂಗ್ರಹಕ್ಕಾಗಿ ಅಕ್ಕಿ ಮುಹೂರ್ತ ನಡೆಯುವುದು ಉಡುಪಿ ಅಷ್ಟಮಠಗಳ ಪರ್ಯಾಯದಲ್ಲಿ ನಡೆದುಕೊಂಡ ಬಂದ ಸಂಪ್ರದಾಯ ಎಂದರು.
ಶೀರೂರು ಮಠದ ದಿವಾನರಾದ ಡಾ.ಉದಯಕುಮಾರ್ ಸರಳತ್ತಾಯ ಮಾತನಾಡಿ, ಮಾ.6ರಂದು ಬೆಳಗ್ಗೆ 6ಗಂಟೆಯಿಂದ ವಿವಿಧ ಧಾರ್ಮಿಕ ವಿಧಿವಿಧಾನಗಳು ಬೆಳಗ್ಗೆ 11:10ಕ್ಕೆ ಮಠದಲ್ಲಿ ಅಕ್ಕಿಮುಹೂರ್ತ ನಡೆಯಲಿದೆ ಎಂದು ವಿವರಿಸಿದರು.
ಅಕ್ಕಿ ಮುಹೂರ್ತದಲ್ಲಿ ಉಡುಪಿಯ ಅಷ್ಟಮಠಗಳಲ್ಲಿ ಉಳಿದ ಏಳು ಮಠಗಳ ಮಠಾಧೀಶರನ್ನು ಆಹ್ವಾನಿಸಲಾಗುವುದು. ಇವರಲ್ಲಿ ಹೆಚ್ಚಿನವರು ಭಾಗವಹಿಸುತ್ತಾರೆ. ಅಕ್ಕಿ ಮುಹೂರ್ತದ ಜೊತೆಗೆ ಶ್ರೀಮಠದಲ್ಲಿ ಅದ್ಯಯನ ನಡೆಸುತ್ತಿರುವ ವಿದ್ಯಾರ್ಥಿಗಳಿಂದ ವೇದಮಂಗಳ ಪಾರಾಯಣವೂ ನಡೆಯಲಿದೆ ಎಂದು ಡಾ.ಸರಳತ್ತಾಯ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಶಾಸಕ ಯಶಪಾಲ್ ಸುವರ್ಣ, ನಗರಸಭಾ ಅಧ್ಯಕ್ಷ ಪ್ರಭಾಕರ ಪೂಜಾರಿ, ಸದಸ್ಯರಾದ ರಮೇಶ್ ಕಾಂಚನ್, ಬಾಲಕೃಷ್ಣ ಶೆಟ್ಟಿ, ಪ್ರಮುಖ ಮುಖಂಡರಾದ ಮುನಿಯಾಲು ಉದಯಕುಮಾರ್ ಶೆಟ್ಟಿ, ಕೃಷ್ಣಮೂರ್ತಿ ಆಚಾರ್ಯ, ಗಣೇಶ ನೇರ್ಗಿ, ಸಂಧ್ಯಾ ರಮೇಶ್, ಮೋಹನ್ ಭಟ್ ಮುಂತಾದವರು ಉಪಸ್ಥಿತರಿದ್ದರು.












