ಮಲ್ಪೆ: ಮೀನುಗಾರ ಆಕಸ್ಮಿಕವಾಗಿ ಕಾಲು ಜಾರಿ ಸಮುದ್ರಕ್ಕೆ ಬಿದ್ದು ಸಾವು.

ಮಲ್ಪೆ: ಮೀನುಗಾರಿಕೆ ನಡೆಸುವ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ಮೀನುಗಾರ ಸಮುದ್ರಕ್ಕೆ ಬಿದ್ದು ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.

ಉತ್ತರ ಕನ್ನಡ ಜಿಲ್ಲೆಯ ಅಂಕೋಲ ಬೊಬ್ರವಾಡದ ವಿಶ್ವಾಸ ಕಾಶಿನಾಥ ಸಾರಾಂಗ (37) ಸಾವನ್ನಪ್ಪಿದ್ದಾರೆ‌. 10 ವರ್ಷದಿಂದ ಬೋಟಿನಲ್ಲಿ ಕಲಾಸಿಯಾಗಿ ಅವರು ಕೆಲಸ ಮಾಡಿಕೊಂಡಿದ್ದರು.

ಜ. 12ರಂದು ಮಲ್ಪೆ ಬಂದರಿನಿಂದ ಮೀನುಗಾರಿಕೆಗೆ ತೆರಳಿದ್ದ ಅವರು ಜ. 17ರಂದು ಸುಮಾರು 40 ನಾಟಿಕಲ್‌ ದೂರದಲ್ಲಿ ಮೀನುಗಾರಿಕೆ ಮಾಡುತ್ತಿರುವ ವೇಳೆ ಸಮುದ್ರದ ಅಲೆಗೆ ಬೋಟಿನಿಂದ ಆಯತಪ್ಪಿ ನೀರಿಗೆ ಬಿದ್ದರು.

ಈ ವೇಳೆ ಬೋಟಿನ ಕಬ್ಬಿಣದ ಕುತ್ತಿಗೆಯ ಅಡಿಭಾಗಕ್ಕೆ ತಾಗಿ ಗಂಭೀರ ಗಾಯವಾಗಿತ್ತು. ಅಪರಾಹ್ನ ಸುಮಾರು 3 ಗಂಟೆ ವೇಳೆಗೆ ಮೃತದೇಹ ಪತ್ತೆಯಾಗಿದೆ‌. ಈ ಬಗ್ಗೆ ಮಲ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.