ಮಣಿಪಾಲ: ಶ್ರೀ ಶಾರದ ಟೀಚರ್ ಟ್ರೈನಿಂಗ್ನ ವಾರ್ಷಿಕೋತ್ಸವವು ಎ. 27ರಂದು ಸಂಸ್ಥೆಯಲ್ಲಿ ನಡೆಯಿತು. ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಅದಮಾರ್ ಮಠ ಶಿಕ್ಷಣ ಸಂಸ್ಥೆಗಳ ಸಂಯೋಜಕರಾದ ಶ್ರೀ ಮಂಜುನಾಥ್ ಎ. ವಿ. ಅವರು ಮಾತನಾಡಿ ಶಿಕ್ಷಕಿಯರು ಮಗುವನ್ನು ತಾಯಿಯಂಂತೆ ಪ್ರೀತಿಸಬೇಕು ಹಾಗೂ ತಮ್ಮನ್ನು ಸಂಪೂರ್ಣ ವೃತ್ತಿಯಲ್ಲಿ ತೊಡಗಿಸಿಕೊಳ್ಳಬೇಕು ಎಂದರು.
ಇಪ್ಪತ್ತು ಮಕ್ಕಳು ಒಂದು ತರಗತಿಯಲ್ಲಿದ್ದರೆ ನಲವತ್ತು ಕಣ್ಣುಗಳು ನಮ್ಮನ್ನು ವೀಕ್ಷಿಸುತ್ತವೆ ಮತ್ತು ಶಿಕ್ಷಕಿಯ ಪಾತ್ರವೇ ಅಂತಿಮ. ತರಗತಿಯ ಒಂದು ಘಟನೆಯನ್ನು ನೆನಪಿಸಿಕೊಂಡು ಅವರು, “ಒಮ್ಮೆ ತರಗತಿಯಲ್ಲಿ ಮಕ್ಕಳಿಗೆ ಚಿತ್ರಬಿಡಿಸಲು ಹೇಳಿದಾಗ ಎಲ್ಲಾ ಮಕ್ಕಳು ಬೇರೆ ಬೇರೆ ಚಿತ್ರವನ್ನು ಬಿಡಿಸಿದ್ದರು ಆದರೆ ಒಂದು ಮಗು ಮಾತ್ರ ಒಂದು ಕೈಯನ್ನು ಇನ್ನೊಂದು ಕೈ ಹಿಡಿಯುವ ಚಿತ್ರ ಬಿಡಿಸಿತ್ತು. ಆಗ ಎಲ್ಲರೂ ಆಶ್ಚರ್ಯ ಚಕಿತರಾಗಿ ಮಗುವನ್ನು ವಿಚಾರಿಸಿದಾಗ, ಮಗುವು ಇದು ನನ್ನ ಕೈ ಮತ್ತು ಅದು ನನ್ನ ಟೀಚರ್ನ ಕೈಯೆಂದು ಹೇಳಿತು” ಎಂದು ಉದಾಹರಣೆಯೊಂದಿಗೆ ತರಬೇತಿ ಶಿಕ್ಷಕಿಯರಿಗೆ ತಿಳಿಯಪಡಿಸಿದರು. ಸಾಮಾನ್ಯವಾಗಿ ಶಿಕ್ಷಕಿಯರು ಮಗುವಿನ ಬೆನ್ನು ಅಥವಾ ತಲೆಯನ್ನು ಸ್ಪರ್ಶಿಸುತ್ತಾರೆ ಆದರೆ ಹೃದಯವನ್ನು ಸ್ಪರ್ಶಿಸುವುದಿಲ್ಲ. ಒಂದು ವೇಳೆ ಶಿಕ್ಷಕಿ ಮಗುವಿನ ಹೃದಯವನ್ನು ಸ್ವರ್ಶಿಸಿದರೆ ನೀವು ನಿಮ್ಮ ಉದ್ಯೋಗವನ್ನು ಖಂಡಿತ ಆನಂದಿಸುವಿರಿ. ಮಕ್ಕಳ ಭವಿಷ್ಯವನ್ನು ರೂಪಿಸುವಲ್ಲಿ ಶಿಕ್ಷಕರ ಪಾತ್ರವು ಅತಿ ಮುಖ್ಯ ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ ಶ್ರೀಮತಿ ಚಂದ್ರಕಲಾರವರು ಅತ್ಯುತ್ತಮ ಹುದ್ದೆಯನ್ನು ನಿರ್ವಹಿಸಲು ಹಾಗೂ ಉತ್ತಮ ಸಮಾಜವನ್ನು ನಿರ್ಮಾಣಗೊಳಿಸಲು ಶಿಕ್ಷಕಿಯರ ಪಾತ್ರ ಮಹತ್ತರವಾದುದೆಂದು ತಿಳಿಸಿದರು. ಸಂಸ್ಥೆಯ ಪ್ರಾಂಶುಪಾಲೆ ಶ್ರೀಮತಿ ಸುನೀತಾರವರು ಶೈಕ್ಷಣಿಕ ವರದಿ ವಾಚನ ಮಾಡಿ, ಈಗಾಗಲೇ ಸಂಸ್ಥೆಯಲ್ಲಿ ಕಲಿಯುತ್ತಿರುವ 26 ವಿದ್ಯಾರ್ಥಿನಿಯರು ಉಡುಪಿ ಜಿಲ್ಲೆಯ ಪ್ರತಿಷ್ಠಿತ ಶಾಲೆಗಳಲ್ಲಿ ಆಯ್ಕೆಯಾಗಿದ್ದಾರೆಂದು ತಿಳಿಸಿದರು. ಉಪನ್ಯಾಸಕರಾದ ಶ್ರೀಮತಿ ದಿವ್ಯಾ ಕೋಟ್ಯಾನ್ರವರು ಗುಂಪು ಚಟುವಟಿಕೆಗಳ ಪ್ರಶಸ್ತಿಯನ್ನು ಘೋಷಣೆ ಮಾಡಿದರು.
ವಿದ್ಯಾರ್ಥಿನಿಯರಾದ ಅಶ್ವಿನಿ ಅತಿಥಿಗಳನ್ನು ಸ್ವಾಗತಿಸಿ, ಹಾಗೂ ಕಾರ್ಯಕ್ರಮವನ್ನು ಶ್ರೀಮತಿ ಅಶ್ವಿನಿ ಮತ್ತು ಉಷಾ ಕಾಮತ್ರವರು ನಿರೂಪಿಸಿದರು. ಶ್ರೀಮತಿ ರೇಷ್ಮಾರವರು ಮುಖ್ಯ ಅತಿಥಿಯ ಪರಿಚಯವನ್ನು ಸಭೆ ಮಾಡಿದರು. ಶ್ರೀಮತಿ ಸುಶ್ಮಾ ಪೈ ವಂದಾರ್ಪಣೆಗೈದರು. ಕೊನೆಯಲ್ಲಿ ತರಬೇತಿ ಶಿಕ್ಷಕಿಯರು ಸಾಂಸ್ಕೃತಿಕ ಕಾರ್ಯಕ್ರಮವನ್ನು ನಡೆಸಿಕೊಟ್ಟರು.