ಮಣಿಪಾಲ: “ನಾರಿ ಶೃಂಗ” ಪೂರ್ವಪ್ರಾಥಮಿಕ ಬೋಧನಾ ಸಾಧನಗಳ ಪ್ರದರ್ಶನ ಉದ್ಘಾಟಿಸಿದ ಡಾ.ಪುಷ್ಪಾ ಕಿಣಿ

ಮಣಿಪಾಲ: ಶ್ರೀ ಶಾರದ ಟೀಚರ್ ಟ್ರೈನಿಂಗ್ ಇನ್ಸ್ಟಿಟ್ಯೂಟ್, ಕ್ರಿಸ್ಟಲ್ ಬಿಜ್‍ಹಬ್, ಒಂದನೇ ಮಹಡಿ, ಡಿಸಿ ಕಛೇರಿ ಬಳಿ, ಮಣಿಪಾಲ, ಪೂರ್ವಪ್ರಾಥಮಿಕ ಶಾಲಾ ಶಿಕ್ಷಕಿಯರಿಗೆ “ನಾರಿ ಶೃಂಗ”ಎಂಬ ಶೀರ್ಷಿಕೆಯ ಅಡಿಯಲ್ಲಿ ಬೋಧನಾ ಸಾಧನಗಳ ಪ್ರದರ್ಶನವನ್ನು ಕೆ.ಎಂ.ಸಿ.ಯ ಮಕ್ಕಳ ವಿಭಾಗದ ಮಕ್ಕಳ ತಜ್ಞೆ ಡಾ. ಪುಷ್ಪಾ ಕಿಣಿ ಅವರು ಫೆ.10 ರಂದು ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಮಕ್ಕಳೊಂದಿಗೆ ಬೆರೆತು, ಪ್ರಯೋಗಿಕ ವಸ್ತುಗಳ ನೆರವಿನಿಂದ ಮಾಹಿತಿ ನೀಡಬೇಕು. ಈ ಆಧುನಿಕ ಯುಗದಲ್ಲಿ ಪೂರ್ವಪ್ರಾಥಮಿಕ ವಿದ್ಯಾರ್ಥಿಗಳಿಗೂ ಒತ್ತಡ ನಿರ್ವಹಣಾ ತಂತ್ರಗಳ ಬಳಕೆ ಅಗತ್ಯವಿದೆ ಹಾಗೂ ಮೊಂಟೆಸ್ಸೆರಿ ವಿಧಾನವು ಒಂದು ಉತ್ತಮ ರೀತಿಯ ಬೋಧನೆಯಾಗಿದೆ ಎಂದರು.

ಸ್ನಾತಕೋತ್ತರ ಪದವಿ ಪಡೆದ ವಿದ್ಯಾರ್ಥಿನಿಯೊಬ್ಬಳು ವಿದೇಶದಲ್ಲಿ ಪೂರ್ವಪ್ರಾಥಮಿಕ ವಿದ್ಯಾರ್ಥಿಗಳೊಂದಿಗೆ ತನ್ನನ್ನು ತಾನು ಸಮರ್ಪಿಸಿಕೊಂಡು, ಈಗ ಪಿ.ಎಚ್.ಡಿ. ಪದವಿ ಪಡೆದು ಜಯಶೀಲರಾದ ಒಂದು ಉದಾಹರಣೆಯನ್ನು ಕೊಟ್ಟರು. ಯಾವುದೇ ಉನ್ನತ ಹುದ್ದೆಯನ್ನು ಅಲಂಕರಿಸಿದರೂ, ಪೂರ್ವಪ್ರಾಥಮಿಕ/ಪ್ರಾಥಮಿಕ ಶಿಕ್ಷಕಿಯರನ್ನು ಎಂದಿಗೂ ನೆನಪಿಸಿಕೊಳ್ಳುತ್ತಾರೆ ಎಂದರು. ಮಕ್ಕಳಲ್ಲಿ ಶಿಸ್ತು ಬೆಳೆಸುವಲ್ಲಿ ಹಾಗೂ ಭವಿಷ್ಯವನ್ನು ರೂಪಿಸುವಲ್ಲಿ ಶಿಕ್ಷಕಿಯರ ಪಾತ್ರ ಬಹಳ ಮಹತ್ವದೆಂದು ಪ್ರದರ್ಶನಕ್ಕೆ ಹಾಜರಾದ ಶಿಕ್ಷಕಿಯರು/ಪ್ರಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳಿಗೂ ಕರೆನೀಡಿದರು. ನಂತರ ಅವರು ಬೋಧನಾ ಸಾಧನಗಳ ಪ್ರದರ್ಶನವನ್ನು ವೀಕ್ಷಿಸಿದರು. ಕಾರ್ಯಕ್ರಮದಲ್ಲಿ ಉಡುಪಿ ಡಯಟ್‍ನ ಉಪಪ್ರಾಂಶುಪಾಲರಾದ ಶ್ರೀಯುತ ಅಶೋಕ್ ಕಾಮತ್ ಹಾಗೂ ಸಂಸ್ಥೆಯ ಅತಿಥಿ ಉಪನ್ಯಾಸಕರಾದ ಶ್ರೀ ವಿವೇಕ ಕಾಮತ್‍ರವರು ಉಪಸ್ಥಿತರಿದ್ದರು.

ಕಾರ್ಯಕ್ರಮದ ಅಧ್ಯಕ್ಷರಾದ ಚಂದ್ರಕಲಾರವರು ಅತಿಥಿಗಳನ್ನು ಸ್ವಾಗತಿಸಿದರು. ವಿದ್ಯಾರ್ಥಿನಿ ಕು. ಅಶ್ವಿನಿಯವರು ಮುಖ್ಯ ಅತಿಥಿಯನ್ನು ಸಭೆಗೆ ಪರಿಚಯಿಸಿದರು ಹಾಗೂ ಪ್ರಾಂಶುಪಾಲರಾದ ಶ್ರೀಮತಿ ಸುನೀತಾರವರು ಸ್ಮರಣಿಕೆ ನೀಡಿ ಗೌರವಿಸಿದರು. ಸಂಸ್ಥೆಯ ಹಿರಿಯ ಉಪನ್ಯಾಸಕಿ ಶ್ರೀಮತಿ ದಿವ್ಯಾ ಆರ್. ಕೋಟ್ಯಾನ್‍ರವರು ವಂದನಾರ್ಪಣೆಗೈದರು ಹಾಗೂ ಕಾರ್ಯಕ್ರವನ್ನು ನಿರೂಪಿಸಿದರು.

ತದನಂತರ ಸಂಸ್ಥೆಯಲ್ಲಿ ತರಬೇತಿ ಪಡೆಯುತ್ತಿರುವ ವಿದ್ಯಾರ್ಥಿ ಶಿಕ್ಷಕಿಯರು ಕಲಿಕಾ ಸಾಧನಗಳ ಪ್ರದರ್ಶನವನ್ನು ನಡೆಸಿಕೊಟ್ಟರು. ಉಡುಪಿ ಆಸುಪಾಸಿನ ಹಲವಾರು ಶಾಲೆಯ ಮುಖ್ಯೋಪಾಧ್ಯಯರು ಹಾಗೂ ಶಿಕ್ಷಕಿಯರು ಈ ಪ್ರದರ್ಶನವನ್ನು ವೀಕ್ಷಿಸಿ ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.