ಬ್ರಹ್ಮಾವರ: ಯುವಕನಿಗೆ ಲೈಂಗಿಕ ಕಿರುಕುಳ – ವಾಸ್ತುತಜ್ಞನ ಬಂಧನ

ಉಡುಪಿ: ಯುವಕನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪದಡಿ ವಾಸ್ತುತಜ್ಞನೋರ್ವನನ್ನು ಪೊಲೀಸರು ಬಂಧಿಸಿದ್ದಾರೆ.

ಬ್ರಹ್ಮಾವರ ಸಮೀಪದ ಮಟಪಾಡಿ ನಿವಾಸಿ ಅನಂತ ನಾಯ್ಕ್ (51) ಬಂಧಿತ ಆರೋಪಿ. ಈತ ಬ್ರಹ್ಮಾವರ ಬಸ್‌ ನಿಲ್ದಾಣ ಸಮೀಪದ ಲಾಡ್ಜ್ ವೊಂದರ ರೂಮಿನಲ್ಲಿ ವಾಸ್ತುತಜ್ಞ, ಜಲತಜ್ಞ, ಯೋಗ ಪಂಡಿತ, ಆಧ್ಯಾತ್ಮಿಕ ಪಂಡಿತ ಎಂಬುದಾಗಿ ಬೋರ್ಡ್ ಹಾಕಿಕೊಂಡು ವ್ಯವಹಾರ ನಡೆಸುತ್ತಿದ್ದ.

18ರ ಹರೆಯದ ಯುವಕ ತನ್ನ ತಂದೆಯೊಂದಿಗೆ ಈತನ ಬಳಿ ವಾಸ್ತು ಕೇಳಲು ಲಾಡ್ಜ್‌ನಲ್ಲಿರುವ ರೂಮಿಗೆ ರಾತ್ರಿ 9ಗಂಟೆ ಸುಮಾರಿಗೆ ಹೋಗಿದ್ದನು. ಈ ಸಂದರ್ಭ ತಂದೆಯನ್ನು ಹೊರಗೆ ಕಳುಹಿಸಿದ ಅನಂತ ನಾಯ್ಕ ಯುವಕನಿಗೆ ಲೈಂಗಿಕ ಕಿರುಕುಳ ನೀಡಿದ್ದಾನೆಂದು ದೂರಲಾಗಿದೆ. ಅದರಂತೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಆರೋಪಿ ವಿರುದ್ಧ ಅಸ್ವಾಭಾವಿಕ ಲೈಂಗಿಕ ಕಿರುಕುಳ ಪ್ರಕರಣ ದಾಖಲಾಗಿದೆ. ಆರೋಪಿ ಅನಂತ ನಾಯ್ಕನನ್ನು ಬಂಧಿಸಿದ ಪೊಲೀಸರು, ಉಡುಪಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯ ಆರೋಪಿಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿ ಆದೇಶ ನೀಡಿದೆ.