ಫೆ.9ರಂದು ಏಳನೇ ಆವೃತ್ತಿಯ “ಮಣಿಪಾಲ ಮ್ಯಾರಥಾನ್‌”

ಉಡುಪಿ: ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಷನ್ (ಮಾಹೆ)ನ ವತಿಯಿಂದ ‘ಮಣಿಪಾಲ ಮ್ಯಾರಥಾನ್’ನ ಏಳನೇ ಆವೃತ್ತಿ ಇದೇ ಫೆ.9ರಂದು ನಡೆಯಲಿದ್ದು, ಈ ಬಾರಿ ದಾಖಲೆಯ 20,000ಕ್ಕೂ ಅಧಿಕ ಸ್ಪರ್ಧಿಗಳು ಭಾಗವಹಿಸಲಿದ್ದಾರೆ ಎಂದು ಮಾಹೆಯ ಪ್ರೊ. ಚಾನ್ಸಲರ್ ಡಾ.ಎಚ್.ಎಸ್.ಬಲ್ಲಾಳ್ ತಿಳಿಸಿದ್ದಾರೆ.

ಮಣಿಪಾಲ ಮಾಹೆಯಲ್ಲಿ ನಡೆ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಬಾರಿ 15,000 ಸ್ಪರ್ಧಿಗಳು ದೇಶದ ಈ ಪ್ರತಿಷ್ಠಿತ ಮ್ಯಾರಥಾನ್‌ನಲ್ಲಿ ಭಾಗವಹಿಸಿದ್ದು, ಈ ಬಾರಿ ಇಂದಿನವರೆಗೆ 20,000ಕ್ಕೂ ಅಧಿಕ ಮಂದಿ ಭಾಗವಹಿಸಲು ಹೆಸರು ನೊಂದಾಯಿಸಿಕೊಂಡಿದ್ದಾರೆ ಎಂದರು.

ಮಣಿಪಾಲ ಮ್ಯಾರಥಾನ್ ಹೆಚ್ಚೆಚ್ಚು ವಿದೇಶಿ ಕ್ರೀಡಾಪಟುಗಳನ್ನು ಆಕರ್ಷಿಸುತಿದ್ದು, ಜಪಾನ್, ಅಮೆರಿಕ, ಇಂಗ್ಲೆಂಡ್ ಫ್ರಾನ್ಸ್, ಜರ್ಮನಿ, ಟರ್ಕಿ, ಇಥಿಯೋಪಿಯಾ, ಕಿನ್ಯಾ, ನಮೀಬಿಯಾ,ಉಗಾಂಡ, ಮಲಾವಿ, ಕಾಂಗೋ, ಘಾನಾ, ಸುಡಾನ್, ಅಬುಧಾಬಿ, ಯುಎಇ ಹಾಗೂ ಆಸ್ಟ್ರೇಲಿಯಾ ದೇಶಗಳ 100ಕ್ಕೂ ಹೆಚ್ಚು ಸ್ಪರ್ಧಿಗಳು ಇದರಲ್ಲಿ ಭಾಗವಹಿಸುವ ಆಸಕ್ತಿಯನ್ನು ತೋರಿಸಿದ್ದು ಈಗಾಗಲೇ ಹೆಸರು ನೊಂದಾಯಿಸಿಕೊಂಡಿದ್ದಾರೆ ಎಂದು ತಿಳಿಸಿದರು.

ಅಲ್ಲದೇ, ಈ ಬಾರಿ ವಿವಿಧ ದೇಶಗಳ 10,000ಕ್ಕೂ ಅಧಿಕ ಆಸಕ್ತ ಕ್ರೀಡಾಪಟುಗಳು ‘ವರ್ಚುವಲ್ ರನ್’ನಲ್ಲಿ ಭಾಗವಹಿಸಲು ಹೆಸರು ನೊಂದಾಯಿಸಿಕೊಂಡಿದ್ದಾರೆ. ಇವರು ಫೆ.7ರಿಂದ 9ರ ನಡುವೆ ತಾವಿರುವ ಸ್ಥಳದಲ್ಲೇ ಐದು ಕಿ.ಮೀ. ದೂರ ಓಡಿ ದಾಖಲೆ ಸಹಿತ ಆ್ಯಪ್‌ನಲ್ಲಿ ವಿವರಗಳನ್ನು ಅಪ್‌ಲೋಡ್ ಮಾಡಿದರೆ ಅವರಿಗೆ ಇ-ಪ್ರಮಾಣಪತ್ರ, ಡಿಜಿಟಲ್ ಬಿಬ್ ಹಾಗೂ ವಿಶೇಷ ಮಣಿಪಾಲ್ ಮ್ಯಾರಥಾನ್ ಸರಕುಗಳನ್ನು ಕಳುಹಿಸಿಕೊಡಲಾಗುವುದು ಎಂದರು.

ಮಣಿಪಾಲ ಮ್ಯಾರಥಾನ್ ಫೆ.9ರಂದು ಮುಂಜಾನೆ 5 ಗಂಟೆಗೆ ಆರಂಭಗೊಳ್ಳಲಿದೆ. 42.195ಕಿ.ಮೀ. ದೂರದ ಈ ಸ್ಪರ್ಧೆ ಮಾಹೆಯಲ್ಲಿ ಆರಂಭಗೊಂಡು ಪೆರಂಪಳ್ಳಿ, ದೊಡ್ಡಣಗುಡ್ಡೆ, ಅಂಬಾಗಿಲು, ಸಂತೆಕಟ್ಟೆ, ಕೆಮ್ಮಣ್ಣು, ಹೂಡೆ, ಮಲ್ಪೆಬೀಚ್, ಕಲ್ಮಾಡಿ, ಕಿದಿಯೂರು, ಉದ್ಯಾವರ, ಕಿನ್ನಿಮೂಲ್ಕಿ, ಉಡುಪಿ, ಕಲ್ಸಂಕ ಮಾರ್ಗವಾಗಿ ಮಾಹೆಯಲ್ಲಿ ಮುಕ್ತಾಯಗೊಳ್ಳಲಿದೆ ಎಂದರು.

ಅಲ್ಲದೇ 21.098ಕಿ.ಮೀ. ದೂರದ ಹಾಫ್ ಮ್ಯಾರಥಾನ್‌ಗೆ ಮುಂಜಾನೆ 5:30ಕ್ಕೆ, 10ಕಿ.ಮೀ. ದೂರದ ಓಟಕ್ಕೆ 6:00ಕ್ಕೆ. 5ಕಿ.ಮೀ. ಓಟಕ್ಕೆ 6:45ಕ್ಕೆ ಹಾಗೂ ಮಾಹೆ ಕ್ಯಾಂಪಸ್ ಒಳಗೆ ನಡೆಯುವ ಮೂರು ಕಿ.ಮೀ. ದೂರದ ಫನ್ ರನ್‌ಗೆ ಬೆಳಿಗ್ಗೆ 8:00ಗಂಟೆಗೆ ಚಾಲನೆ ನೀಡಲಾಗುವುದು ಎಂದರು.
ಸುದ್ದಿಗೋಷ್ಠಿಯಲ್ಲಿ ಮಾಹೆಯ ಪ್ರೊ ವೈಸ್ ಚಾನ್ಸಲರ್‌ಗಳಾದ ಡಾ.ಶರತ್ ರಾವ್, ಡಾ.ನಾರಾಯಣ ಸಭಾಹಿತ್, ರಿಜಿಸ್ಟ್ರಾರ್ ಡಾ.ಗಿರಿಧರ್ ಕಿಣಿ, ಸಿಒಒ ರವಿರಾಜ್ ಹಾಗೂ ಕ್ರೀಡಾಸಂಯೋಜಕ ಡಾ.ವಿನೋದ್ ನಾಯಕ್ ಉಪಸ್ಥಿತರಿದ್ದರು.