ಫೆಬ್ರವರಿ 11: ಶ್ರೀಕ್ಷೇತ್ರ ಕುದ್ರೋಳಿ ಶ್ರೀ ಭಗವತೀ ದೇವಸ್ಥಾನದಲ್ಲಿ ‘ಚಂದ್ರಹಾಸ’ ಮತ್ತು ‘ಶ್ರೀನಿವಾಸ ಕಲ್ಯಾಣ’ ಕಾಲಮಿತಿ ಯಕ್ಷಗಾನ ಪ್ರದರ್ಶನ

ಮಂಗಳೂರು: ಬಳ್ಕೂರು ಯಕ್ಷ ಕುಸುಮ ಪ್ರತಿಷ್ಠಾನ ಮತ್ತು ರಂಗಸ್ಥಳ ಮಂಗಳೂರು (ರಿ) ಇವರ ಆಶ್ರಯದಲ್ಲಿ ಶ್ರೀಕ್ಷೇತ್ರ ಕುದ್ರೋಳಿ ಭಗವತೀ ದೇವಸ್ಥಾನದ ಪ್ರೋತ್ಸಾಹದೊಂದಿಗೆ ಮಂಗಳೂರಿನಲ್ಲಿ ದ್ವಿತೀಯ ಬಾರಿಗೆ ಇದೇ ಬರುವ ಫೆಬ್ರವರಿ 11 ಭಾನುವಾರ ದಂದು ಸಂಜೆ 4.30 ರಿಂದ ರಾತ್ರಿ 10 ರವರೆಗೆ ಬಡಗು ತಿಟ್ಟಿನ ಪ್ರಸಿದ್ಧ ಯಕ್ಷಗಾನ ಮೇಳವಾಗಿರುವ ಶ್ರೀಕ್ಷೇತ್ರ ಹಟ್ಟಿಯಂಗಡಿ ಮೇಳ, ಇವರಿಂದ ಕಾಲಮಿತಿ ಯಕ್ಷಗಾನ ಪ್ರದರ್ಶನವಾಗಿ ‘ಚಂದ್ರಹಾಸ’ ಮತ್ತು ‘ಶ್ರೀನಿವಾಸ ಕಲ್ಯಾಣ’ ಎಂಬ ಕಥಾನಕ ಪ್ರದರ್ಶನವು ಕೊಡಿಯಾಲ್ ಬೈಲ್ ಕುದ್ರೋಳಿ ಶ್ರೀ ಭಗವತೀ ದೇವಸ್ಥಾನದ ಸಭಾಂಗಣದಲ್ಲಿ ನಡೆಯಲಿದೆ.

ಇದೇ ಸಂದರ್ಭದಲ್ಲಿ ‘ಬಳ್ಕೂರು ಯಕ್ಷ ಕುಸುಮ’ ಪುರಸ್ಕಾರವನ್ನು ಕಲಾವಿದರಾದ ಶ್ರೀಯುತ ಸೂರಿಕುಮೇರು ಕೆ ಗೋವಿಂದ ಭಟ್ ಮತ್ತು ‘ಯಕ್ಷ ಕುಸುಮ ಯುವ ಪುರಸ್ಕಾರ’ವನ್ನು ಯುವ ಕಲಾವಿದ ಸಾತ್ವಿಕ್ ನೆಲ್ಲಿತೀರ್ಥ ಇವರಿಗೆ ನೀಡಿ ಗೌರವಿಸಲಾಗುವುದು.

ಈ ಕಾರ್ಯಕ್ರಮದಲ್ಲಿ ನಮ್ಮೊಂದಿಗೆ ಅಭ್ಯಾಗತರಾಗಿ ಮಂಗಳೂರು ನಗರ ದಕ್ಷಿಣ ವಿಧಾನ ಸಭಾ ಕ್ಷೇತ್ರ ಶಾಸಕರಾದ ಶ್ರೀ ವೇದವ್ಯಾಸ್ ಕಾಮತ್, ಮಂಗಳೂರಿನ ಹಿರಿಯ ಲೆಕ್ಕ ಪರಿಶೋಧಕರಾದ ಶ್ರೀ ಎಸ್ ಎಸ್ ನಾಯಕ್, ಮಂಗಳೂರು ರಂಗಸ್ಥಳ ಸಂಸ್ಥೆಯ ಶ್ರೀ ಎಸ್ ಎಲ್ ನಾಯಕ್ ಮತ್ತು ಶ್ರೀ ದಿನೇಶ್ ಪೈ, ಮಂಗಳೂರು, ಶ್ರೀ ಸದಾನಂದ ಬಳ್ಕೂರು, ಅಧ್ಯಕ್ಷರು, ಕಾವ್ರಾಡಿ ವ್ಯವಸಾಯ ಸಹಕಾರಿ ಸಂಘ, ಕಂಡ್ಲೂರು, ಶ್ರೀ ರಂಜಿತ್ ಕುಮಾರ್ ವಕ್ವಾಡಿ, ಯಜಮಾನರು, ಶ್ರೀ ಕ್ಷೇತ್ರ ಹಟ್ಟಿಯಂಗಡಿ ಮೇಳ ಇವರು ಭಾಗವಹಿಸಲಿದ್ದಾರೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ಬಳ್ಕೂರು ಯಕ್ಷ ಕುಸುಮ ಪ್ರತಿಷ್ಠಾನದ ಪರವಾಗಿ ಕರುಣಾಕರ ಬಳ್ಕೂರು ತಿಳಿಸಿರುತ್ತಾರೆ.ಸೂರಿಕುಮೇರು ಕೆ ಗೋವಿಂದ ಭಟ್ ಇವರು ಮೂಲತಃ ಕೆ ಗೋವಿಂದ ಭಟ್, ಅವರು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕುಕ್ಕೆ ಮನೆಯವರು.

1951 ರ ಸುಮಾರಿನಲ್ಲಿ ಯಕ್ಷರಂಗಕ್ಕೆ ಇಳಿದ ಇವರು ಕುರಿಯ ವಿಠಲ ಶಾಸ್ತ್ರೀ, ಪರಮಶಿವನ್, ಮಾಧವ ಮೆನನ್, ರಾಜನ್ ಅಯ್ಯರ್ ಅವರಲ್ಲಿ ಕಲಿತು ಧರ್ಮಸ್ಥಳ, ಮೂಲ್ಕಿ, ಕೂಡ್ಲು, ಸುರತ್ಕಲ್ ಇರಾ ಸೋಮನಾಥೇಶ್ವರ ಮೇಳಗಳಲ್ಲಿ ತಿರುಗಾಟವನ್ನು ಮಾಡಿರುತ್ತಾರೆ. ಕೌರವ, ರಕ್ತಬೀಜ, ಇಂದ್ರಜಿತು, ಮಾಗಧ, ಕರ್ಣ, ಅತಿಕಾಯ, ನರಕಾಸುರ, ದೇವೇಂದ್ರ, ಭೀಷ್ಮ ವಿಶ್ವಮಿತ್ರ ಸೇರಿದಂತೆ ಹಲವು ಪಾತ್ರಗಳಿಗೆಜೀವತುಂಬಿದ ಕಲಾವಿದ.

ಇವರ ಯಕ್ಷಕಲಾ ಸೇವೆಯನ್ನು ಪರಿಗಣಿಸಿ ಈಗಾಗಲೇ ಕೇಂದ್ರ ಸಂಗೀತ ನಾಟಕ ಅಕಾಡೆಮಿ, ಕರ್ನಾಟಕ ರಾಜ್ಯೋತ್ಸವ ಸೇರಿದಂತೆ ಯಕ್ಷಗಾನಕ್ಕೆ ಎರಡನೇಯರಾಷ್ಟ್ರಪ್ರಶಸ್ತಿಯನ್ನು ಮುಡಿಗೇರಿಸಿಕೊಂಡವರು ಯುವ ಕಲಾವಿದ ಸಾತ್ವಿಕ್ ನೆಲ್ಲಿತೀರ್ಥ ರಂಗಭೂಮಿ ಕಲಾವಿದರಾಗಿದ್ದ ದಿವಂಗತ ಭಾಸ್ಕರ ನೆಲ್ಲಿತೀರ್ಥ ಮತ್ತು ವಿಶಾಲ ಇವರ ಸುಪುತ್ರನಾಗಿರುವ ಇವರು, ತಂದೆಯವರಿಂದಲೇ ಯಕ್ಷಗಾನ ಮತ್ತುರಂಗಭೂಮಿಯ ಪ್ರೇರಣೆಯನ್ನು ಪಡೆದ ಯುವ ಕಲಾವಿದ. ವಿದ್ಯಾರ್ಥಿ ದೆಸೆಯಲ್ಲಿಯೇ ಯಕ್ಷಗಾನ ರಂಗದಲ್ಲಿ ಶುಂಭ, ಮಹಿಷಾಸುರ, ರಕ್ತಬೀಜ, ತಾರಕಾಸುರ, ಶಿಶುಪಾಲ ಸೇರಿದಂತೆ ಹಲವು ಪಾತ್ರಗಳಿಗೆ ಜೀವ ತುಂಬುವ ಮೂಲಕ ಯಕ್ಷರಂಗದಲ್ಲಿ ಭರವಸೆಯ ಕಲಾವಿದನೆಂಬ ಹೆಗ್ಗಳಿಕೆಯನ್ನು ಪಡೆದುಕೊಂಡಿದ್ದಾರೆ.

ಕಾಲೇಜು ಮಟ್ಟದಲ್ಲಿ ಉತ್ತಮ ಬಣ್ಣಗಾರಿಕೆ ವಿಭಾಗದಲ್ಲಿ ಪ್ರಥಮ ಪ್ರಶಸ್ತಿಯನ್ನು ಪಡೆದಿರುವ ಇವರು ಚಲನಚಿತ್ರಗಳಲ್ಲಿ ಉತ್ತಮ ಚಿತ್ರಗಾರನಾಗಿಯೂ ಗುರುತಿಸಿಕೊಂಡಿದ್ದಾರೆ.