ದಾಂಪತ್ಯ ಜೀವನದ ಸಿಹಿ ಕಹಿ ಹಂಚುವ ಕಿರುಚಿತ್ರ “ಟಾಮ್& ಜೆರ್ರಿ ಸಂಸಾರ”: ಸಂಸಾರದಲ್ಲಿ ಜಗಳ ಆಡುವವರು ಒಮ್ಮೆ ನೋಡಿ

ಒಂದು ಸುಂದರ ದಾಂಪತ್ಯ ಹೇಗಿರಬೇಕು, ಹೇಗಿರಬಾರದು ಎನ್ನುವುದನ್ನು ನವಿರಾಗಿ, ಒಂದಷ್ಟು ಹಾಸ್ಯದ ಕಚಕುಳಿಯೊಂದಿಗೆ ಹೇಳುವ ಟಾಮ್ &ಜೆರ್ರಿ ಸಂಸಾರ ಕಿರುಚಿತ್ರ ರಿಲೀಸ್ ಆಗಿದ್ದು,ಒಟ್ಟು 16 ನಿಮಿಷದ ಈ ಕಿರುಚಿತ್ರ ಸಂಸಾರದ ಬಿಕ್ಕಟ್ಟುಗಳನ್ನು ಸಹಜವಾಗಿ ಮತ್ತು ಸುಂದರವಾಗಿ ಪ್ರಸ್ತುತಪಡಿಸುತ್ತ ಸಾಗುತ್ತದೆ. ಪ್ರೀತಿಸಿ ಮದುವೆಯಾದ ಜೋಡಿ ಕ್ರಮೇಣ ಪರಸ್ಪರ ಹೊಂದಾಣಿಕೆಯಿಲ್ಲದೇ,ಹೇಗೆ ದಾಂಪತ್ಯದ ದಿನಗಳನ್ನು ಕಳೆಯುತ್ತಾರೆ,ಇನ್ನೇನು ಸಂಸಾರ ಬಿದ್ದೇ ಹೋಗುತ್ತದೆ ಎನ್ನುವಾಗ ಮತ್ತೆ ಸಂಬಂಧ ಹೇಗೆ ಹೂವಂತೆ ಅರಳುತ್ತದೆ ಎನ್ನುವುದು ಕಿರು ಚಿತ್ರದ ತಿರುಳು.

ಈ ಭೂಮಿ ಮೇಲಿರುವ ಪ್ರತಿಯೊಬ್ಬರಲ್ಲೂ ದೆವ್ವ ದೇವರು ಇದ್ದೇ ಇರುತ್ತಾರೆ, ನಾವು ಯಾವ ತರ ನಡೆದುಕೊಳ್ತೇವೆ ಎನ್ನುವುದರ ಮೇಲೆ ಕೆಲವೊಮ್ಮೆ ಆ ದೆವ್ವ, ಕೆಲವೊಮ್ಮೆ ಆ ದೇವರು ಕಾಣಿಸುತ್ತೆ ಎಂದು ಸಿನಿಮಾದ ಕೊನೆಯಲ್ಲಿ ಬರುವ ಸಂದೇಶ ಈ ಕಾಲಕ್ಕೆ ಬೇಕಾದ ದೊಡ್ಡ ಸಂದೇಶವೂ ಹೌದು.ಇದನ್ನು ಪರಿಣಾಮಕಾರಿತಾಗಿ ಕಟ್ಟಿಕೊಟ್ಟಿರೋ ಕಿರುಚಿತ್ರ ಸಹಜವಾಗಿಯೇ ಕಾಡುತ್ತದೆ. ನಟನೆ, ಸಂಗೀತ, ನಿರೂಪಣೆ ಈ ಎಲ್ಲರದಲ್ಲೂ ಸಿನಿಮಾದ ಪ್ರಸ್ತುತಿ ಗಮನ ಸೆಳೆಯುತ್ತದೆ.

ಅಶೋಕ್ ಕುಮಾರ್ ಅವರು ಕತೆ ಬರೆದು ನಿರ್ದೇಶಿಸಿರುವ ಈ ಸಿನಿಮಾದ ಕತೆ ಚೆಂದ.

ಸುಮಂತ್ ಆಚಾರ್ಯ ಅವರ ಕ್ಯಾಮರಾ ಕಟ್ಸ್ ನಲ್ಲಿ ವಿಭಿನ್ನತೆ ಇದೆ. ರೋಹಿತ್ ಸೋವರ್ ಅವರ ಸಂಗೀತದಲ್ಲಿ ಹೊಸ ಇಂಪಿದೆ‌. ಕಾಫಿ ಡಬ್ಬಿ ಎಂಟರ್ ಟ್ರೈನ್ ಮೆಂಟ್ ನಿಂದ ಮೂಡಿಬಂದಿರುವ ಈ ಕಿರುಚಿತ್ರದಲ್ಲಿ ಪ್ರತೀಕ್, ಪಾಯಲ್ ಚೆಂಗಪ್ಪ,ಸುವೀಶ್, ಪೂಜಾ ಮಹಾದೇವ್ ಮೊದಲಾದ ಪ್ರತಿಭಾವಂತ ಕಲಾವಿದರು ಒಂದೊಂದು ದೃಶ್ಯಗಳಿಗೂ ಜೀವ ತುಂಬಿದ್ದಾರೆ.ಸಂಸಾರದಲ್ಲಿ ಆಗಾಗ ಜಗಳ ಆಡುವವರು ಒಮ್ಮೆ ನೋಡಲೇಬೇಕಾದ ಕಿರುಚಿತ್ರವಿದು.