ಡಾ.ಸರ್ಜಿಗೆ ಮತ ನೀಡಿ ವಿಧಾನ ಪರಿಷತ್’ಗೆ ಕಳಿಸಿಕೊಡಿ: ಪಿಇಎಸ್ ಕಾಲೇಜಿನ ಆಡಳಿತ ಸಂಯೋಜಕ ಡಾ.ನಾಗರಾಜ್ ಮನವಿ

ಶಿವಮೊಗ್ಗ: ನಗರದ ಪಿಇಎಸ್ ಕಾಲೇಜ್ ಸಭಾಂಗಣದಲ್ಲಿ ಶನಿವಾರ ನೈರುತ್ಯ ಪದವೀಧರ ಕ್ಷೇತ್ರದ ಚುನಾವಣೆಯ ಹಿನ್ನೆಲೆ ನೈರುತ್ಯ ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮತಯಾಚಿಸಿದರು.

ಈ ಸಂದರ್ಭದಲ್ಲಿ ಪಿಇಎಸ್ ಕಾಲೇಜಿನ ಆಡಳಿತ ಸಂಯೋಜಕರಾದ ಡಾ. ನಾಗರಾಜ್ ಮಾತನಾಡಿ,ಡಾ. ಧನಂಜಯ ಸರ್ಜಿ ಅವರು ರಾಜ್ಯದ ಹೆಸರಾಂತ ಮಕ್ಕಳ ತಜ್ಞರು, ವಿದ್ಯಾವಂತರು ರಾಜಕೀಯಕ್ಕೆ ಬರಬೇಕು ಎಂದು ಪ್ರಧಾನಿ ನರೇಂದ್ರ ಮೋದಿಯವರು ಪ್ರತಿ ಬಾರಿ ಹೇಳುತ್ತಲೇ ಇರುತ್ತಾರೆ, ಅಂತೆಯೇ ಡಾ. ಧನಂಜಯ ಸರ್ಜಿ ಇಂದು ನೈರುತ್ಯ ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ನಮ್ಮ ಮುಂದಿದ್ದಾರೆ. ಕೃಷಿ ಮತ್ತು ವ್ಯಾಪಾರ ಕುಟುಂಬದ ಹಿನ್ನೆಲೆಯಲ್ಲಿ ಬಂದ ಸರ್ಜಿ, ಉತ್ತಮ ಸೇವೆ ಸಲ್ಲಿಸುವ ಮೂಲಕ ವೈದ್ಯಕೀಯ ಕ್ಷೇತ್ರದಲ್ಲಿ ಸಾಧನೆ ಮಾಡಿ ಇದೀಗ ನೈರುತ್ಯ ಪದವೀಧರ ಕ್ಷೇತ್ರದ ಮೂಲಕ ರಾಜಕೀಯಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಸರ್ಜಿ ಅವರಿಗೆ ಮತ ಹಾಕುವುದರ ಮೂಲಕ ಈ ಬಾರಿ ಅವರನ್ನು ವಿಧಾನ ಪರಿಷತ್ ಗೆ ಆಯ್ಕೆ ಮಾಡಿ ಕಳುಹಿಸಬೇಕು ಎಂದು ಮನವಿ ಮಾಡಿದರು.

ರಾಜ್ಯ ಪ್ರಕೋಸ್ಟಗಳ ಸಂಯೋಜಕರಾದ ಎಸ್. ದತ್ತಾತ್ರಿ ಮಾತನಾಡಿ, ಕಳೆದ ಮೂವತ್ತು ವರ್ಷಗಳಿಂದ ನೈರುತ್ಯ ಪದವೀಧರ ಕ್ಷೇತ್ರದಲ್ಲಿ ಬಿಜೆಪಿ ಗೆದ್ದಿದೆ. ಈ ಹಿಂದೆ ನೈರುತ್ಯ ಪದವೀಧರ ಕ್ಷೇತ್ರವನ್ನು ಡಿ. ಎಚ್. ಶಂಕರಮೂರ್ತಿಯವರು ಪ್ರತಿನಿಧಿಸುತ್ತಿದ್ದರು ಈ ಬಾರಿ ಡಾ. ಧನಂಜಯ ಸರ್ಜಿ ಅವರಿಗೆ ಗುರುತಿಸಿ ಪಕ್ಷ ಟಿಕೆಟ್ ನೀಡಿದೆ. ನಾವೆಲ್ಲರೂ ಸರ್ಜಿ ಅವರ ರಾಯಭಾರಿಗಳಾಗಿ ಕೆಲಸ ಮಾಡಬೇಕು ಎಂದರು.

ಈ ಚುನಾವಣೆಯಲ್ಲಿ ಇವಿಎಂ ಇರುವುದಿಲ್ಲ, ಬದಲಾಗಿ ಬ್ಯಾಲೆಟ್ ಪೇಪರ್ ಇರುತ್ತದೆ, ತಾವೆಲ್ಲರೂ ಡಾ.ಧನಂಜಯ ಸರ್ಜಿ ಹೆಸರಿನ ಮುಂದೆ ಒಂದು ಗೆರೆ ಎಳೆಯುವ ಮೂಲಕ ಮೊದಲ ಪ್ರಾಶಸ್ತ್ಯ ದ ಮತವನ್ನು ಹಾಕಬೇಕು. ಮಧ್ಯ ಕರ್ನಾಟಕದ ಭಾಗದಲ್ಲಿ ಹೆಚ್ಚು ಪ್ರಖ್ಯಾತಿ ಹೊಂದಿರುವ ಡಾ.ಸರ್ಜಿ ವಿಧಾನ ಪರಿಷತ್ ಗೆ ಆಯ್ಕೆಯಾಗಿ ಹೋದರೆ ಪದವೀಧರರ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಸಫಲರಾಗುತ್ತಾರೆ ಎಂದು ಹೇಳಿದರು.

ನೈರುತ್ಯ ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ. ಧನಂಜಯ ಸರ್ಜಿ ಮಾತನಾಡಿ, ಹುಟ್ಟಿದಾಗ ಹೆಸರು ಇರುವುದಿಲ್ಲ, ಉಸಿರು ಇರುತ್ತದೆ, ಮರಣ ಹೊಂದಿದ ಮೇಲೆ ಉಸಿರು ಇರುವುದಿಲ್ಲ, ಹೆಸರು ಇರುತ್ತದೆ, ಹುಟ್ಟು ಮತ್ತು ಸಾವುಗಳ ನಡುವೆ ನಾವು ಸಾಧನೆಗಳನ್ನು ಮಾಡಿ ಹೆಸರನ್ನ ಸಂಪಾದಿಸಬೇಕು. ರೈತರು, ಯೋಧರಂತೆ ದೇಶದ ಬೆನ್ನೆಲುಬು ಪದವೀಧರರು. ದೇಶದ ಭವ್ಯ ಭವಿಷ್ಯದ ನಿರ್ಮಾಣದಲ್ಲಿ ಪದವೀಧರರ ಪಾತ್ರ ಬಹಳ ಮುಖ್ಯ. ಪದವೀಧರರ ಸಮಸ್ಯೆಗಳನ್ನು ಅತಿ ಹತ್ತಿರದಿಂದ ಬಲ್ಲವನಾಗಿದ್ದು, ಪದವೀಧರ ಸಮಸ್ಯೆಗಳಿಗೆ ಸ್ಪಂದಿಸುತ್ತೇನೆ ಎಂದು ಭರವಸೆ ನೀಡಿದರು.

ಈ ವೇಳೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿ. ಎಚ್. ಮಾಲತೇಶ್ ಹಾಜರಿದ್ದರು. ಈ ವೇಳೆ ಕಾಲೇಜಿನ ಉಪನ್ಯಾಸಕರು, ಸಿಬ್ಬಂದಿ, ಪದವೀಧರರು ಹಾಜರಿದ್ದರು.