ಟಿ20 ವಿಶ್ವಕಪ್: ಪಾಕ್​​ ವಿರುದ್ಧ ಭಾರತ ತಂಡಕ್ಕೆ ರೋಚಕ ಜಯ.

ನ್ಯೂಯಾರ್ಕ್‌: 2024ರ ಐಸಿಸಿ ಟಿ20 ವಿಶ್ವಕಪ್‌ನ 19ನೇ ಪಂದ್ಯ ಅಮೆರಿಕಾದ ನ್ಯೂಯಾರ್ಕ್‌ನಲ್ಲಿ ಭಾರತ ತನ್ನ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ 6 ರನ್ ಗಳ ರೋಚಕ ಗೆಲುವು ಸಾಧಿಸಿದೆ.
ಭಾನುವಾರ ನಸ್ಸೌ ಕೌಂಟಿ ಇಂಟರ್‌ನ್ಯಾಶನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟಾಸ್‌ ಸೋತರೂ ಮೊದಲು ಬ್ಯಾಟಿಂಗ್‌ ಮಾಡುವ ಅವಕಾಶ ಪಡೆದ ಟೀಂ ಇಂಡಿಯಾ, 19 ಓವರ್‌ಗಳಲ್ಲಿ 119 ರನ್‌ಗಳಿಗೆ ಆಲೌಟ್ ಆಗುವ ಮೂಲಕ ಸಾಧರಣ ಮೊತ್ತ ಕಲೆ ಹಾಕಿತು.
ಭಾರತ ತಂಡದ ಬ್ಯಾಟಿಂಗ್ ತೀರಾ ಕಳಪೆಯಾಗಿತ್ತು. ಅಗ್ರ ಕ್ರಮಾಂಕ, ಮಧ್ಯಮ ಕ್ರಮಾಂಕ ಎಲ್ಲವೂ ವಿಫಲವಾಯಿತು. ಹೀಗಾಗಿ ತಂಡ 119 ರನ್‌ಗಳಿಗೆ ಆಲೌಟ್ ಆಯಿತು.

ಪಾಕಿಸ್ತಾನದ ಬ್ಯಾಟರ್‌ಗಳನ್ನು ಕಟ್ಟಿ ಹಾಕುವಲ್ಲಿ ಯಶಸ್ವಿ:
ಪಾಕಿಸ್ತಾನ ಗೆಲುವಿಗೆ 120 ರನ್ ಗಳ ಗುರಿ ಬೆನ್ನತ್ತಿದ್ದು, ನಿಗದಿತ 20 ಓವರ್ ಗಳಲ್ಲಿ ಏಳು ವಿಕೆಟ್ ನಷ್ಟಕ್ಕೆ 113 ರನ್ ಗಳಿಸುವ ಮೂಲಕ ಸೋಲು ಒಪ್ಪಿಕೊಂಡಿತು. ಟೀಂ ಇಂಡಿಯಾ ಬೌಲರ್ ಗಳು ಅದ್ಭುತವಾಗಿ ಬೌಲಿಂಗ್ ಮಾಡಿ, ಪಾಕಿಸ್ತಾನದ ಬ್ಯಾಟರ್‌ಗಳು ರನ್‌ ಹೊಡೆಯದಂತೆ ಕಟ್ಟಿ ಹಾಕುವಲ್ಲಿ ಯಶಸ್ವಿಯಾದರು.
ಪಾಕಿಸ್ತಾನ ತಂಡ ಒಂದು ಹಂತದಲ್ಲಿ 14ನೇ ಓವರ್‌ಗಳಲ್ಲಿ ಮೂರು ವಿಕೆಟ್‌ಗೆ 80 ರನ್ ಕಲೆಹಾಕಿತ್ತು. ಆದರೆ ರಿಜ್ವಾನ್-ಶಾದಾಬ್ ಔಟಾದ ಬಳಿಕ ತಂಡ ತತ್ತರಿಸಿ, 6 ರನ್​​ಗಳಿಂದ ಸೋಲೊಪ್ಪಿಕೊಂಡಿತು.
ಭಾರತದ ಪರ ವಿರಾಟ್‌ ಕೊಹ್ಲಿ ಕೇವಲ 4 ರನ್ ಗಳಿಸಿ ಔಟ್‌ ಆದರೆ, ರೋಹಿತ್‌ ಶರ್ಮಾ ‌13 ರನ್‌ಗಳಿಸಿ ವಿಕೆಟ್‌ ಕಳೆದುಕೊಂಡರು. ಮೂರನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದ ರಿಷಬ್‌ ಪಂತ್‌ ಮತ್ತು ಅಕ್ಸರ್‌ ಪಟೇಲ್‌ ನಿಧಾನವಾಗಿ ರನ್‌ ಕಲೆ ಹಾಕಿದರು.
ಪಾಕಿಸ್ತಾನ ಪರ ಹ್ಯಾರಿಸ್ ರೌಫ್ ಮತ್ತು ನಸೀಮ್ ಶಾ ತಲಾ 3 ವಿಕೆಟ್‌ ಕಬಳಿಸಿ ಸಂಭ್ರಮಿಸಿದರೆ, ಮೊಹಮ್ಮದ್‌ ಅಮೀರ್‌ 2 ವಿಕೆಟ್ ಹಾಗೂ ಶಾಹೀನ್ ಅಫ್ರಿದಿ 1 ವಿಕೆಟ್‌ ಪಡೆದರು.