ಜ್ಞಾನಸುಧಾ: ಪ್ರತಿಷ್ಠಾ ಮಹೋತ್ಸವದ ಸಂಭ್ರಮ, ಪ್ರತಿಭಾ ಪುರಸ್ಕಾರ 68.79ಲಕ್ಷ ರೂ. ವಿದ್ಯಾರ್ಥಿವೇತನ ವಿತರಣೆ.

ಕಾರ್ಕಳ: ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಗುರುತಿಸಿ ಪ್ರೋತ್ಸಾಹಿಸಿ ಬೆಳೆಸುತ್ತಿರುವ ಜ್ಞಾನಸುಧಾದ ಕಾರ್ಯವು ಸ್ತುತ್ಯಾರ್ಹವಾದುದು. ಡಾ.ಸುಧಾಕರ್ ಶೆಟ್ಟಿಯವರ ಸಮಾಜಮುಖಿ ಕಾರ್ಯ ಶ್ಲಾಘನೀಯ ಎಂದು ಉಡುಪಿಯ ಶ್ರೀ ಕೃಷ್ಣಾಪುರ ಮಠದ ಶ್ರೀ ಶ್ರೀ ವಿದ್ಯಾಸಾಗರ ತೀರ್ಥ ಸ್ವಾಮೀಜಿಯವರು ನುಡಿದರು.

ಅವರು ಗಣಿತನಗರದ ಜ್ಞಾನಸುಧಾ ಆವರಣದಲ್ಲಿರುವ ಶ್ರೀ ಮಹಾಗಣಪತಿ ದೇವಸ್ಥಾನದ 11ನೇ ಪ್ರತಿಷ್ಠಾ ಮಹೋತ್ಸವ ಕಾರ್ಯಕ್ರಮ ಹಾಗೂ ‘ಜ್ಞಾನಸುಧಾ ಪ್ರತಿಭಾ ಪುರಸ್ಕಾರ’ದಲ್ಲಿ ಆಶೀರ್ವಚನ ನೀಡಿ ಮಾತನಾಡಿದರು.
ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್(ರಿ.)ನ ಸಂಸ್ಥಾಪಕರಾದ ನಾಡೋಜ ಡಾ. ಜಿ. ಶಂಕರ್ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಮುಂದಿನ ಬದುಕಿನಲ್ಲಿ ಸೇವಾ ಮನೋಭಾವವನ್ನು ಬೆಳೆಸಿಕೊಂಡು ಜೀವನೋತ್ಸಾಹದ ಗಣಿಗಳಾಗ ಬೇಕು. ಆದರ್ಶ ನಡೆನುಡಿಯ ಮೂಲಕ ಸಮಾಜಮುಖಿಯಾಗಿ ಬೆಳೆಯಬೇಕು ಎಂದರು. ಡಾ.ಸುಧಾಕರ್ ಶೆಟ್ಟಿಯವರ ಮೂಲಕ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳು ಸಮಾಜಕ್ಕೆ ನೀಡುತ್ತಿರುವ ಕೊಡುಗೆಯು ಆದರ್ಶನೀಯ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾರ್ಕಳ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ವಿ.ಸುನಿಲ್ ಕುಮಾರ್ ಮಾತನಾಡಿ, ಸಮಾಜ ಸಂತೃಪ್ತಗೊಳಿಸುವ ಜ್ಞಾನಸುಧಾದ ಉದಾತ್ತ ಕಲ್ಪನೆ ಆದರಣೀಯ. ಇಲ್ಲಿನ ಸಿಬ್ಬಂದಿಗಳ ಒಮ್ಮನಸ್ಸಿನ ದುಡಿಮೆಯು ಅನ್ಯ ಸಂಸ್ಥೆಗಳಿಗೂ ಮಾದರಿ ಎಂದರು.

ಪ್ರತಿಭಾ ಪುರಸ್ಕಾರ:
ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್‌ನ ವತಿಯಿಂದ ಕಾರ್ಯಕ್ರಮದಲ್ಲಿ 2023-24ನೇ ಸಾಲಿನ ಎಸ್.ಎಸ್.ಎಲ್.ಸಿ., ಪ್ರಥಮ ಹಾಗೂ ದ್ವಿತೀಯ ಪಿ.ಯು.ಸಿ. ವಾರ್ಷಿಕ ಪರೀಕ್ಷೆಯಲ್ಲಿ ಉನ್ನತ ಸಾಧನೆ ಮಾಡಿದ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು 68.79ಲಕ್ಷ ರೂ ವಿದ್ಯಾರ್ಥಿವೇತನವನ್ನು ನೀಡಿ ಗೌರವಿಸಲಾಯಿತು. ಜೊತೆಗೆ ಉಪನ್ಯಾಸಕ ಹಾಗೂ ಶಿಕ್ಷಕರನ್ನು ಗುರುತಿಸಲಾಯಿತು. ಈ ಮೊದಲು 20ಲಕ್ಷದಷ್ಟು ಪ್ರೋತ್ಸಾಹ ಧನವನ್ನು ನೀಡಿದ್ದು ಇಲ್ಲಿಯವರೆಗೆ ಒಟ್ಟು 90ಲಕ್ಷದಷ್ಟು ರೂಪಾಯಿಯ ವಿದ್ಯಾರ್ಥಿ ವೇತನವನ್ನು ನೀಡಿದಂತಾಗುತ್ತದೆ. ಎರಡನೇ ಹಂತದ ವಿದ್ಯಾರ್ಥಿವೇತನವನ್ನು ರಾಜ್ಯ ಹಾಗೂ ರಾಷ್ಟ್ರಮಟ್ಟದ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ 22 ಡಿಸೆಂಬರ್ 2024ರ ಸಂಸ್ಥಾಪಕರ ದಿನಾಚರಣೆಯಂದು ವಿತರಿಸಲಾಗುವುದು.

ಸಂಸ್ಥೆಯಲ್ಲಿ ಹತ್ತು ವರ್ಷದ ಸೇವೆ ಸಲ್ಲಿಸಿದ ಆಂಗ್ಲಭಾಷಾ ವಿಭಾಗದ ಮುಖ್ಯಸ್ಥೆ ಶ್ರೀಮತಿ ಸಂಗೀತಾ ಕುಲಾಲ್‍ರವರನ್ನು, ಮೈಂಟೆನೆನ್ಸ್ ವಿಭಾಗದ ಹಿರಿಯ ಮೇಲ್ವಿಚಾರಕ ಶ್ರೀ ಶ್ರೀಕಾಂತ್ ಸುವರ್ಣ ಇವರಿಂದ ಸನ್ಮಾನಿಸಲಾಯಿತು.

ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಸನ್ ಟ್ರಸ್ಟ್‌ನ ಅಧ್ಯಕ್ಷರಾದ ಡಾ.ಸುಧಾಕರ್ ಶೆಟ್ಟಿಯವರು ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ರಸಾಯನ ಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಪ್ರಜ್ವಲ್ ಕುಲಾಲ್ ನಿರೂಪಿಸಿ, ಪಿ.ಆರ್.ಒ. ಶ್ರೀಮತಿ ಜ್ಯೋತಿ ಪದ್ಮನಾಭ ಭಂಡಿ ವಂದಿಸಿದರು. ಜ್ಞಾನಭಾರತ್ ಬಾಲವೃಂದ ಬಾಲೆಯರು ಪ್ರಾರ್ಥಿಸಿದರು. ಕಾರ್ಯಕ್ರಮದಲ್ಲಿ ಟ್ರಸ್ಟಿಗಳಾದ ಶ್ರೀಮತಿ ವಿದ್ಯಾವತಿ.ಎಸ್.ಶೆಟ್ಟಿ, ಶ್ರೀಅನಿಲ್ ಕುಮಾರ್ ಜೈನ್, ಸಿಎ ನಿತ್ಯಾನಂದ ಪ್ರಭು, ಆಡಳಿತ ಮಂಡಳಿ ಸದಸ್ಯ ಶ್ರೀ ಶಾಂತಿರಾಜ್ ಹೆಗ್ಡೆ, ಕಾರ್ಕಳ ಜ್ಞಾನಸುಧಾ ಸಿ.ಇ.ಒ ಹಾಗೂ ಪ್ರಾಂಶುಪಾಲರಾದ ಶ್ರೀ ದಿನೇಶ್ ಎಂ.ಕೊಡವೂರ್, ತ್ರಿವಳಿ ಸಂಸ್ಥೆಗಳ ಪ್ರಾಂಶುಪಾಲರು, ಉಪಪ್ರಾಂಶುಪಾಲರು ಹಾಗೂ ಬೋಧಕ, ಬೋಧಕೇತರ ಸಿಬ್ಬಂದಿವರ್ಗ ಉಪಸ್ಥಿತರಿದ್ದರು.