ಕೇರಳಕ್ಕೆ ಮುಂಗಾರು ಆಗಮನ; ಮೇ.31 ಅಥವಾ ಜೂ.1ರಂದು ಕರ್ನಾಟಕಕ್ಕೆ ಆಗಮಿಸುವ ಸಾಧ್ಯತೆ.

ಬೆಂಗಳೂರು: ಕೇರಳಕ್ಕೆ ಇಂದು ​ಮುಂಗಾರು ಮಳೆ ಪ್ರವೇಶಿಸಲಿದೆ. ಮೇ 31 ಅಥವಾ ಜೂ 1ರಂದು ಕರ್ನಾಟಕಕ್ಕೆ ಆಗಮಿಸುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ(ಐಎಂಡಿ) ಮೂನ್ಸೂಚನೆ ಕೊಟ್ಟಿದೆ.

ಅಂಡಮಾನ್​ ಮತ್ತು ನಿಕೋಬಾರ್​ ದ್ವೀಪದಿಂದ ಮೇ 19ರಿಂದ ಮಾನ್ಸೂನ್​ ಆರಂಭವಾಗಿತ್ತು. ಪೂರಕ ವಾತಾವರಣ ಇರುವುದು, ಮಾರುತಗಳು ಪ್ರಬಲವಾಗಿರುವ ಹಿನ್ನೆಲೆಯಲ್ಲಿ ಹಂತ ಹಂತವಾಗಿ ವ್ಯಾಪಿಸಿರುವ ಮಾನ್ಸೂನ್​ ಕೇರಳದ ಸಮೀಪದಲ್ಲಿದೆ. ಇಂದು ಕೇರಳದ ಕರಾವಳಿಗೆ ಆಗಮಿಸಲಿದೆ ಎಂದು ಐಎಂಡಿ ಮಾಹಿತಿ ನೀಡಿದೆ.

ಜೂನ್​ನಿಂದ ಸೆಪ್ಟೆಂಬರ್​ವರೆಗೆ ವಾಡಿಕೆಗಿಂತ ಹೆಚ್ಚು ಮಳೆ ಬೀಳುವ ಸಾಧ್ಯತೆ ಇದೆ. ಕರ್ನಾಟಕದಲ್ಲಿಯೂ ವಾಡಿಕೆಗಿಂತ ತುಸು ಹೆಚ್ಚು ಮಳೆ ಸುರಿಯಲಿದೆ. ಜೂನ್​ನಲ್ಲಿ ಭಾರತ ಸೇರಿ ದೇಶಾದ್ಯಂತ ವಾಡಿಕೆಯಷ್ಟೇ ಬೀಳಲಿದೆ ಎಂದರು.

ಜೂ.2 ರಂದು ಭಾರಿ ಮಳೆ:
ರಾಜ್ಯದಲ್ಲಿ ಮುಂದಿನ ೨ ದಿನ ಸಾಧಾರಣ ವರ್ಷಧಾರೆಯಾಗಲಿದೆ ಎಂದು ರಾಜ್ಯ ಹವಾಮಾನ ಇಲಾಖೆ ಮೂನ್ಸೂಚನೆ ಕೊಟ್ಟಿದೆ. ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಧಾರವಾಡ, ಗದಗ, ಹಾವೇರಿ, ಬೆಂಗಳೂರು, ಬೆಂ.ಗ್ರಾಮಾಂತರ, ಚಾಮರಾಜನಗರ, ಚಿಕ್ಕಮಗಳೂರು, ದಾವಣಗೆರೆ, ಹಾಸನ, ಕೊಡಗು, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗದಲ್ಲಿ ಜೂ 1 ರವರೆಗೆ ಸಾಧಾರಣ ಪ್ರಮಾಣದಲ್ಲಿ ಮಳೆ ಬೀಳಲಿದೆ. ರಾಮನಗರ, ಚಾಮರಾಜನಗರದಲ್ಲಿ ಜೂ 2ರಂದು, ಚಿಕ್ಕಮಗಳೂರು, ಕೊಡಗು, ಮೈಸೂರಿನಲ್ಲಿ ಜೂ 3 ರಂದು ಭಾರಿ ಮಳೆ ಬೀಳುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಇಲಾಖೆ ಯೆಲ್ಲೋ ಅರ್ಲಟ್​ ಘೋಷಿಸಿದೆ.