ಉಡುಪಿ: ಸಾಕುನಾಯಿಯನ್ನು ಕುಟುಂಬ ಸದಸ್ಯರಂತೆಯೇ ಕಾಣುವವರಿದ್ದಾರೆ.ಅದು ಸತ್ತರೂ ತಮ್ಮದೇ ಮನೆಯ ಸದಸ್ಯರು ಅಗಲಿದರೇನೋ ಎಂಬಂತೆ ದುಃಖ ಪಡುವವರಿದ್ದಾರೆ. ಕಾಪುವಿನಲ್ಲಿ ಇಂತಹದ್ದೇ ಒಂದು ಶ್ವಾನ ಪ್ರೇಮದ ಪ್ರಸಂಗ ನಡೆದಿದ್ದು ಅದು ಸತ್ತು ದಫನ ಮಾಡಿದ ಬಳಿಕವೂ ಹೊರತೆಗೆದು ಪೋಸ್ಟ್ ಮಾರ್ಟಂ ಮಾಡಿದ ಪ್ರಕರಣ ನಡೆದಿದೆ.
ಕಾಪುವಿನ ಸಾಮಾಜಿಕ ಕಾರ್ಯಕರ್ತೆ ಮಣಿಪುರ ಬಡಗುಮನೆಯ ಬಿಂದು ಶೆಟ್ಟಿ ಅವರ ಸಾಕುನಾಯಿ ಸತ್ತು ಹೋಗಿತ್ತು. ಅವರು ಅದನ್ನು ಮನೆಯ ವಠಾರದಲ್ಲಿ ಹೂತು ಹಾಕಿದ್ದರು. ಆದರೆ ತಮ್ಮ ಪ್ರೀತಿಯ ಸಾಕುನಾಯಿಗೆ ಯಾರೋ ಆಹಾರದಲ್ಲಿ ವಿಷ ಹಾಕಿರುವ ವಿಷಯ ತಿಳಿಯುತ್ತಲೇ ಅವರು ಕಾಪು ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರು ದಾಖಲಾದ ಕಾರಣ ಕಾನೂನು ಪ್ರಕ್ರಿಯೆ, ಮತ್ತು ವೈದ್ಯಕೀಯ ಪರೀಕ್ಷೆ ನಡೆಸಬೇಕಾಯಿತು.

ಹೆಡ್ ಕಾನ್ ಸ್ಟೇಬಲ್ ಗಳಾದ ಅರುಣ್ ಉಳ್ಳೂರು, ಸುಧಾಕರ್ ನಾಯ್ಕ ಹಾಗೂ ಪ್ರಾಣಿ ದಯಾ ಸಂಘದ ಮಂಜುಳ ಅವರ ಸಮಕ್ಷಮದಲ್ಲಿ ನಾಯಿಯ ಕಳೇಬರವನ್ನು ಗುಂಡಿಯಿಂದ ಮೇಲಕ್ಕೆತ್ತಿದ್ದಾರೆ. ಪಶುವೈದ್ಯ ಡಾ.ಚಂದ್ರಕಾಂತ್ ಅವರು ಕಳೇಬರದ ಮರಣೋತ್ತರ ಪರೀಕ್ಷೆ ನಡೆಸಿದ್ದು, ವರದಿ ಬರಬೇಕಿದೆ. ಶ್ವಾನದ ಕಳೇಬರ ಸಾಗಿಸಲು ಸಾಮಾಜಿಕ ಕಾರ್ಯಕರ್ತ ನಿತ್ಯಾನಂದ ಒಳಕಾಡು ನೆರವಾದರು.












