ಉಡುಪಿ: ಉಡುಪಿ ವಕೀಲರ ಸಂಘದ 125 ನೇ ವರ್ಷದ ಶತಮಾನೋತ್ತರ ರಜತ ಮಹೋತ್ಸವದ ಮುಂದುವರಿದ ಭಾಗವಾಗಿ ಎಮ್‌ಜಿಎಮ್ ಮೈದಾನದಲ್ಲಿ ಎರಡು ದಿನ ನಡೆದ ರಾಜ್ಯಮಟ್ಟದ ಹೊನಲು ಬೆಳಕಿನ ಕ್ರೀಡಾಕೂಟ ಮುಕ್ತಾಯಗೊಂಡಿತು.

ಸಮಾರೋಪದಲ್ಲಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಧೀಶ ಕಿರಣ್.ಎಸ್.ಗಂಗಣ್ಣನವರ್ ಮಾತನಾಡಿ, ಉಡುಪಿ ವಕೀಲರ ಸಂಘವು ನಿತ್ಯದ ಕಾರ್ಯಗಳೊಂದಿಗೆ ಕ್ರೀಡಾಕೂಟವನ್ನು ಯಶಸ್ವಿಯಾಗಿ ನಿಭಾಯಿಸಿದ್ದಾರೆ. ವಕೀಲರ ಬೇಡಿಕೆಗಳಿಗೆ ಕೊನೆ ಇರುವುದಿಲ್ಲ. ಕ್ರೀಡೆ ಹಾಗು ನ್ಯಾಯಾಂಗದಲ್ಲಿ ತುಡಿತ ಇದ್ದಾಗ, ಹೊಸ ವಿಚಾರಗಳು ಬರುತ್ತವೆ. ಅಂತಹ ಮನಸ್ಸುಗಳಿಂದ ಇಂತಹ ಬದಲಾವಣೆಗಳನ್ನು ತರಲು ಸಾಧ್ಯವಿದೆ ಎಂದರು.

ಸಾಮಾನ್ಯವಾಗಿ ಹುದ್ದೆಯಿಂದ ವ್ಯಕ್ತಿಗೆ ಗೌರವ ದೊರಕುತ್ತದೆ. ಆದರೆ ಉಡುಪಿ ವಕೀಲರ ಸಂಘದ ಅಧ್ಯಕ್ಷ ರೆನೋಲ್ಡ್ ಪ್ರವೀಣ್ ಕುಮಾರ್ ಅವರು ಮಾಡುವ ಕಾರ್ಯಗಳಿಂದ ಅವರ ವರ್ಚಸ್ಸು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಸೂರ್ಯನನ್ನು ಧರೆಗಿಳಿಸುವ ಸಾಮರ್ಥ್ಯ ಅವರಲ್ಲಿದೆ. ಅವರ ನಾಯಕತ್ವದ ತಂಡವು ಕ್ರೀಡಾಕೂಟವನ್ನು ಅದ್ಬುತವಾಗಿ ಸಂಘಟಿಸುವಲ್ಲಿ ಯಶಸ್ವಿಯಾಗಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.

ಮಂಗಳೂರು ವಕೀಲರ ಸಂಘದ ಅಧ್ಯಕ್ಷ ಹೆಚ್.ವಿ ರಾಘವೇಂದ್ರ ಮಾತನಾಡಿ, ಕರಾವಳಿ ಭಾಗದಲ್ಲಿ ಹೈಕೋರ್ಟಿನ ವಿಭಾಗೀಯ ಪೀಠವನ್ನು ಸ್ಥಾಪಿಸಬೇಕೆಂಬ ಬೇಡಿಕೆಗೆ ಉಡುಪಿ ವಕೀಲರ ಸಂಘದ ಸಹಕಾರ ನೀಡಬೇಕು. ಮುಂದಿನ ದಿನಗಳಲ್ಲಿ ಈ ಬೇಡಿಕೆಯೂ ಹೋರಾಟ ಸ್ವರೂಪ ಪಡೆದುಕೊಳ್ಳಲಿದ್ದು, ಇದಕ್ಕೆ ಉಡುಪಿ ನ್ಯಾಯವಾದಿಗಳು ಹಾಗು ಸಂಘದ ಬೆಂಬಲವನ್ನು ಯಾಚಿಸಿದರು.

ಪೋಕ್ಸೋ ವಿಶೇಷ ನ್ಯಾಯಾಲಯದ ಹೆಚ್ಚುವರಿ ಮತ್ತು ಸತ್ರ ನ್ಯಾಯಧೀಶ ಶ್ರೀನಿವಾಸ್ ಸುವರ್ಣ, ಹಿರಿಯ ನ್ಯಾಯವಾದಿ ಎಮ್.ಶಾಂತಾರಾಮ್ ಶೆಟ್ಟಿ, ಎಮ್‌ಐಟಿ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಸತೀಶ್ ಮಲ್ಯ, ಉಡುಪಿ ವಕೀಲರ ಸಂಘದ ಉಪಾಧ್ಯಕ್ಷ, ಕ್ರೀಡಾಕೂಟದ ಸಂಚಾಲಕ ಮಿತ್ರ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.
ಇಂಚರಾ ಶಿವಪುರ ಪ್ರಾರ್ಥಿಸಿದರು. ಉಡುಪಿ ವಕೀಲರ ಸಂಘದ ಅಧ್ಯಕ್ಷ ರೆನೋಲ್ಡ್ ಪ್ರವೀಣ್ ಕುಮಾರ್ ಸ್ವಾಗತಿಸಿದರು. ಕಾರ್ಯದರ್ಶಿ ರಾಜೇಶ್ ಎ.ಆರ್ ವಂದಿಸಿದರು. ನ್ಯಾಯವಾದಿ ಸಹನಾ ಕುಂದರ್ ನಿರೂಪಿಸಿದರು.












