ಉಡುಪಿ: ಉಪಮುಖ್ಯಮಂತ್ರಿಯಾಗಿ ಆಧಿಕಾರ ವಹಿಸಿಕೊಂಡ ಬಳಿಕ ಮೊದಲ ಬಾರಿ ಉಡುಪಿ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಭೇಟಿ ನೀಡಿದ ಕೆಪಿಸಿಸಿ ರಾಜ್ಯಾಧ್ಯಕ್ಷ ಹಾಗೂ ರಾಜ್ಯದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಕರಾವಳಿಯ ಕಾಂಗ್ರೆಸ್ ಕಾರ್ಯಕರ್ತರಿಗೆ ಕಿವಿಮಾತು, ಸಲಹೆ, ಸೂಚನೆಗಳೊಂದಿಗೆ ಎಚ್ಚರಿಕೆಯ ಮಾತುಗಳನ್ನು ಹೇಳಿ ಹೋದರು.
‘ವ್ಯಕ್ತಿ ಪೂಜೆಯನ್ನು ಬಿಡಿ.. ಪಕ್ಷದ ಪೂಜೆ ಮಾಡಿ… ಜಾತಿ ಆಧಾರದ ರಾಜಕಾರಣವನ್ನು ಬಿಟ್ಟುಬಿಡಿ.. ಎಲ್ಲಾ ವರ್ಗದವರನ್ನು ಜೊತೆಯಲ್ಲಿ ಕರೆದೊಯ್ಯುವ ಸಂಕಲ್ಪ ಮಾಡಿ. ಆಗ ಪಕ್ಷ ಮತ್ತೆ ಗೆಲುವಿನ ಹಾದಿಗೆ ಬರಲು ಸಾಧ್ಯವಾಗುತ್ತದೆ.’ ಎಂದು ಡಿಕೆಶಿ ನುಡಿದರು.ಹಿಂದೆ ಕರಾವಳಿಯಲ್ಲಿ ಕಾಂಗ್ರೆಸ್ ವಿಧಾನಸಭೆಯ ಎಲ್ಲಾ ಸೀಟುಗಳನ್ನು ಗೆಲ್ಲುತ್ತಿತ್ತು. ಆದರೆ ಈಗ ಯಾಕೆ ಮಂಗಳೂರು-ಉಡುಪಿಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲ್ಲುತ್ತಿಲ್ಲ ಎಂಬ ಚಿಂತೆ ಕಾಡುತ್ತಿದೆ. ಪಕ್ಷಕ್ಕೆ ಜನರನ್ನು ತಲುಪಲು ಯಾಕೆ ಸಾಧ್ಯವಾಗುತ್ತಿಲ್ಲ. ಈ ಬಗ್ಗೆ ನೀವೇ ಸಮಾಲೋಚನೆ ಮಾಡಬೇಕು ಎಂದರು.
ಕಳೆದ ಚುನಾವಣೆಯಲ್ಲಿ 86 ಕಾಂಗ್ರೆಸ್ ಮಂದಿ ಸೋತಿದ್ದಾರೆ. ಇಲ್ಲೆಲ್ಲಾ ಹೊಸ ಅಭ್ಯರ್ಥಿಗಳನ್ನು ನಿಲ್ಲಿಸಲು ಚಿಂತನೆ ನಡೆದಿದೆ. ನಾನು ನಡೆಸಿದ ಸಮೀಕ್ಷೆಯೊಂದರಲ್ಲಿ ಇವುಗಳಲ್ಲಿ ಪ್ರಯತ್ನಿಸಿದರೆ 60 ಕ್ಷೇತ್ರಗಳಲ್ಲಿ ಗೆಲ್ಲಲು ಅವಕಾಶಗಳಿವೆ. ಕರಾವಳಿಯಲ್ಲೂ 7-8 ಸೀಟು ಗೆಲ್ಲಬಹುದು. ಹೀಗಾಗಿ ಈ ಬಗ್ಗೆ ನೀವು ಈಗಿನಿಂದಲೇ ಪ್ರಯತ್ನ ಪ್ರಾರಂಭಿಸಬೇಕು ಎಂದು ಸಲಹೆ ನೀಡಿದರು.ಇದಕ್ಕೆ ವ್ಯಕ್ತಿ ಪೂಜೆಯನ್ನು ನಿಲ್ಲಿಸಿ, ಪಕ್ಷದ ಪೂಜೆ ಪ್ರಾರಂಭಿಸಿ. ಜಾತಿ ಆಧಾರಿತ ರಾಜಕಾರಣ ಬಿಡಿ. ಚುನಾವಣೆ ಗೆಲ್ಲಲು ಎಲ್ಲಾ ಸಮುದಾಯದ ಬೆಂಬಲ ಬೇಕು. ಈಗ ನೋಡಿ ನನ್ನ ಕ್ಷೇತ್ರದಲ್ಲಿ ಬ್ರಾಹ್ಮಣರೆಲ್ಲರೂ ನನಗೆ ಮತ ಹಾಕುತ್ತಾರೆ. ಕಳೆದ ಉಪಚುನಾವಣೆಯಲ್ಲಿ ನನ್ನ ತಮ್ಮ ಸೋತ ಕ್ಷೇತ್ರವೂ ಸೇರಿದಂತೆ ಮೂರೂ ಕ್ಷೇತ್ರಗಳಲ್ಲಿ ನಾವು ಜಯಗಳಿಸಿದ್ದು, ಬಿಜೆಪಿ- ಜೆಡಿಎಸ್‌ನಿಂದ ಅದನ್ನು ಕಿತ್ತುಕೊಂಡಿದ್ದು ಇಂಥ ಯೋಜನೆಯ ಮೂಲಕ ಎಂದು ಬಹಿರಂಗ ಪಡಿಸಿದರು.
ಕಾಂಗ್ರೆಸ್ ಹಿಂದೆ ಹೀಗೆ ಮಾಡಿದೆ..ಹಾಗೆ ಮಾಡಿದೆ ಎಲ್ಲಾ ಬಿಡಿ. ಈಗಿನ ನಮ್ಮ ಸಾಧನೆಗಳನ್ನು ಜನರ ಮನೆ-ಮನಸ್ಸಿಗೆ ಮುಟ್ಟಿಸಿ. ಜನರ ಬದುಕು ಕಟ್ಟಿಕೊಡುವ ಕಾರ್ಯಕ್ರಮ- ಗ್ಯಾರಂಟಿ ಯೋಜನೆ- ಬಗ್ಗೆ ನೆನಪಿಸಿ ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.2ನೇ ವರ್ಷಕ್ಕೆ ವಿಶೇಷ ಕಾರ್ಯಕ್ರಮ: ಸದ್ಯವೇ ರಾಜ್ಯ ಸರಕಾರಕ್ಕೆ ಎರಡು ವರ್ಷ ತುಂಬಲಿದೆ. ಈ ವೇಳೆ ವಿಶೇಷ ಕಾರ್ಯಕ್ರಮವೊಂದನ್ನು ಘೋಷಿಸಲಾಗುತ್ತದೆ. ಗ್ರಾಮೀಣಾಭಿವೃದ್ಧಿ, ಕಂದಾಯ ಹಾಗೂ ಐದು ಗ್ಯಾರಂಟಿ ಯೋಜನೆಗಳ ಸಚಿವರನ್ನೊಳಗೊಂಡ ಕೋರ್ ಸಮಿತಿಯನ್ನು ರಚಿಸಿದ್ದು, ಅವರು ಜನರಿಗಾಗಿ ಹೊಸ ಯೋಜನೆ ರೂಪಿಸಲಿದ್ದಾರೆ ಎಂದರು.
ಸರಕಾರಕ್ಕೆ ಎರಡು ವರ್ಷ ತುಂಬುವ ವೇಳೆ ರಾಜ್ಯಾದ್ಯಂತ 100ಕಡೆ ಕಾಂಗ್ರೆಸ್ ಕಚೇರಿ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಲಾಗುವುದು. ನಮ್ಮ ನಾಯಕರಾದ ರಾಹುಲ್ ಗಾಂಧಿ ಹಾಗೂ ಮಲ್ಲಿಕಾರ್ಜುನ ಖರ್ಗೆ ಅವರ ಉಪಸ್ಥಿತಿಯಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ಪ್ರತಿ ವಿಧಾನಸಭಾ ಕ್ಷೇತ್ರಕ್ಕೊಂದು ಕಚೇರಿ ಮಾಡುವ ಯೋಜನೆ ಇದೆ. ಇದರಲ್ಲಿ ಎಲ್ಲಾ ಕಾರ್ಯಕರ್ತರು, ನಾಯಕರು ಕೈಜೋಡಿಸಬೇಕು. ಇದಕ್ಕಾಗಿ ಈಗಲೇ ಕಾರ್ಯೋನ್ಮುಖರಾಗಿ. ಕಚೇರಿ ಕೆಪಿಸಿಸಿ ಹೆಸರಿನಲ್ಲಿ ನೊಂದಣಿಗೊಳ್ಳಬೇಕು. ಇಲ್ಲದಿದ್ದರೆ ಶಿಲಾನ್ಯಾಸ ಮಾಡುವುದಿಲ್ಲ ಎಂದರು.ಶೀಘ್ರದಲ್ಲೇ ರಾಜ್ಯದಲ್ಲಿ ಜಿಪಂ ಹಾಗೂ ತಾಪಂ ಚುನಾವಣೆ ಘೋಷಣೆಯಾಗಲಿದೆ.ಇದಕ್ಕಾಗಿ ಎಲ್ಲಾ ಸಿದ್ಧತೆ ಮಾಡಿಕೊಳ್ಳಿ. ಕ್ಷೇತ್ರಗಳ ಮೀಸಲಾತಿಗಾಗಿ ಸಮಾಲೋಚನೆ ನಡೆಯುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾಧ್ಯಕ್ಷ ಅಶೋಕುಮಾರ್ ಕೊಡವೂರು, ಎಂಎಲ್‌ಸಿ ಮಂಜುನಾಥ ಭಂಡಾರಿ, ಐವನ್ ಡಿಸೋಜ, ನಾಯಕರಾದ ಜಯಪ್ರಕಾಶ್ ಹೆಗ್ಡೆ, ವಿನಯಕುಮಾರ್ ಸೊರಕೆ, ಗೋಪಾಲ ಪೂಜಾರಿ, ಎಂ.ಎ.ಗಫೂರ್, ಉದಯ ಕುಮಾರ್ ಶೆಟ್ಟಿ ಮುನಿಯಾಲು, ರಾಜು ಪೂಜಾರಿ, ಪ್ರಸಾದ್‌ರಾಜ್ ಕಾಂಚನ್, ದಿನೇಶ್ ಹೆಗ್ಡೆ ಮೊಳಹಳ್ಳಿ, ರಮೇಶ್ ಕಾಂಚನ್, ಹರೀಶ್ ಕಿಣಿ, ಮಿಥುನ್ ರೈ, ಕಿಶನ್ ಹೆಗ್ಡೆ ಕೊಳ್ಕೆಬೈಲ್, ಅಣ್ಣಯ್ಯ ಶೇರಿಗಾರ್ ಮುಂತಾದವರು ಉಪಸ್ಥಿತರಿದ್ದರು.
ಗುಂಪುಗಾರಿಕೆಗೆ ಅವಕಾಶವಿಲ್ಲ
ಪಕ್ಷದಲ್ಲಿ ಯಾವುದೇ ಗುಂಪುಗಾರಿಕೆಗೆ ಇನ್ನು ಅವಕಾಶವಿಲ್ಲ. ಆ ಗುಂಪು, ಈ ಗುಂಪು ಎಂದು ಗುರುತಿಸಿಕೊಳ್ಳಬೇಡಿ. ಇಲ್ಲಿ ಇರುವುದು ಒಂದೇ ಪಾರ್ಟಿ ಎಂಬುದು ನೆನಪಿರಲಿ.
ಕರಾವಳಿಯಲ್ಲಿ ಕಾಂಗ್ರೆಸ್ ಮತ್ತೆ 8-9 ಸೀಟು ಗೆಲ್ಲಿಸಿಕೊಡುವುದು ನಾಯಕರ ಜವಾಬ್ದಾರಿ. ಇಲ್ಲದಿದ್ದರೆ ಹೊಸ ವ್ಯಕ್ತಿಗಳಿಗೆ ಜವಾಬ್ದಾರಿ ನೀಡುತ್ತೇವೆ. ನಮಗೆ ಅಭ್ಯರ್ಥಿಗಳ ಗೆಲುವು ಮುಖ್ಯವೇ ಹೊರತು, ವ್ಯಕ್ತಿ ಮುಖ್ಯ ಅಲ್ಲ ಎಂದು ಡಿ.ಕೆ. ಶಿವಕುಮಾರ್ ಸ್ಪಷ್ಟವಾಗಿ ನುಡಿದರು.












