ಉಡುಪಿ ಶ್ರೀ ಭಗವಾನ್ ನಿತ್ಯಾನಂದ ಮಂದಿರ ಮಠ: 2 ಕೋ ರೂ. ವೆಚ್ಚದಲ್ಲಿ ನೂತನ ಬಾಲಭೋಜನಾಲಯ, ಧ್ಯಾನ ಮಂದಿರ ಲೋಕಾರ್ಪಣೆ

ಉಡುಪಿ: ಉಡುಪಿ ಕವಿ ಮುದ್ದಣ ಮಾರ್ಗದಲ್ಲಿರುವ ಶ್ರೀ ಭಗವಾನ್ ನಿತ್ಯಾನಂದ ಮಂದಿರ ಮಠದ ಮೊದಲ ಮಹಡಿಯಲ್ಲಿ ಸುಮಾರು 2 ಕೋ ರೂ. ವೆಚ್ಚದಲ್ಲಿ ನೂತನವಾಗಿ ನಿರ್ಮಿಸಲಾದ ದಿ.ಉಮಾ ಕೃಷ್ಣ ರಾವ್ ಅವರ ಸ್ಮರಣಾರ್ಥ ಅವರ ಪುತ್ರ ಮುಂಬಯಿ ಉದ್ಯಮಿ ಕೆ.ಕೆ. ಆವರ್ಸೇಕರ್ ನಿರ್ಮಿಸಿಕೊಟ್ಟ ಬಾಲ ಭೋಜನಾಲಯ ಮತ್ತು ಧ್ಯಾನ ಮಂದಿರ ಲೋಕಾರ್ಪಣೆ ಮೇ.10ರಂದು ಜರುಗಿತು.

ಮಂದಿರ ಮಠದ ಮ್ಯಾನೇಜಿಂಗ್ ಟ್ರಸ್ಟಿಕೆ.ಕೆ. ಆವರ್ಸೇಕರ್ ಮುಂಬಯಿ ಉದ್ಘಾಟಿಸಿದರು. ಜಂಟಿ ಕಾರ್ಯನಿರ್ವಾಹಕ ಟ್ರಸ್ಟಿಕೆ. ಮೋಹನಚಂದ್ರನ್ ನಂಬಿಯಾರ್, ಶಾಸಕ ಯಶ್ ಪಾಲ್ ಎ. ಸುವರ್ಣ ಶುಭಾಹಾರೈಸಿದರು.

ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ, ಮುಂಬಯಿ ಉದ್ಯಮಿಗಳಾದ ಸುರೇಂದ್ರ ಕಲ್ಯಾಣಪುರ, ನಾಗೇಶ್ ಪಾಂಡೆ, ಮಾಧವ ನಾಡಕರ್ಣಿ, ಟ್ರಸ್ಟಿ ಪುರುಷೋತ್ತಮ ಪಿ. ಶೆಟ್ಟಿ ಉದ್ಯಮಿಗಳಾದ ಡಾ.ಜಿ. ಶಂಕರ್, ಡಾ.ತಲ್ಲೂರು ಶಿವರಾಮ ಶೆಟ್ಟಿ ಮಂದಿರ ಮಠದ ಎಕ್ಸಿಕ್ಯೂಟಿವ್ ಟ್ರಸ್ಟಿ ಕೆ. ದಿವಾಕರ ಶೆಟ್ಟಿ ತೋಟದಮನೆ, ವೀಣಾ ದಿವಾಕರ ಶೆಟ್ಟಿ, ಆಡಳಿತ ಮಂಡಳಿ ಅಧ್ಯಕ್ಷ ಉದಯ ಕುಮಾರ್ ಶೆಟ್ಟಿ ಬನ್ನಂಜೆ, ಪ್ರಧಾನ ಕಾರ್ಯದರ್ಶಿ ಈಶ್ವರ್ ಶೆಟ್ಟಿ ಚಿಟ್ಪಾಡಿ, ಕೋಶಾಧಿಕಾರಿ ಶಶಿಕುಮಾರ್ ಶೆಟ್ಟಿ ಗೋವಾ, ಟ್ರಸ್ಟಿಗಳು, ಕಾರ್ಯಕಾರಿ ಸಮಿತಿ, ಸೇವಾ ಸಮಿತಿ ಸದಸ್ಯರು ಉಪಸ್ಥಿತರಿದ್ದರು.

ಶ್ರೀ ಭಗವಾನ್ ನಿತ್ಯಾನಂದ ಮಂದಿರ ಮಠದಲ್ಲಿ ಗಣಹೋಮ, ಶ್ರೀ ನಿತ್ಯಾನಂದ ಸ್ವಾಮಿಗೆ ವಿಶೇಷ ಪೂಜೆ, ಮಧ್ಯಾಹ್ನ ಮಹಾಪೂಜೆ ನೆರವೇರಿತು. ಮಧ್ಯಾಹ್ನ ಸಾವಿರಾರು ಮಂದಿ ಭಕ್ತರು ಅನ್ನಪ್ರಸಾದ ಸ್ವೀಕರಿಸಿದರು. ಬೆಳಗ್ಗೆ ಮಕ್ಕಳ ಭಜನ ಕುಣಿತ ಸ್ಪರ್ಧೆಯಲ್ಲಿ ಜಿಲ್ಲೆಯ 18 ತಂಡಗಳು ಭಾಗವಹಿಸಿದ್ದವು. ರಾಮಚಂದ್ರ ಮಿಜಾರು ನಿರೂಪಿಸಿದರು.