ಉಡುಪಿ ಪುತ್ತಿಗೆ ಪರ್ಯಾಯ ಮಹೋತ್ಸವ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಹೊರಕಾಣಿಕೆ ಸಮರ್ಪಣೆ

ಉಡುಪಿ: ಪುತ್ತಿಗೆ ಮಠಾಧೀಶರಾದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರ ಐತಿಹಾಸಿಕ ಚತುರ್ಥ ಪರ್ಯಾಯೋತ್ಸವದ ಅಂಗವಾಗಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಇಂದು ಹೊರಕಾಣಿಕೆಯನ್ನು ಸಮರ್ಪಿಸಲಾಯಿತು.

ಉಡುಪಿ ಜೋಡುಕಟ್ಟೆಯಲ್ಲಿ ಹೊರಕಾಣಿಕೆ ಮೆರವಣಿಗೆಗೆ ಚಾಲನೆ ನೀಡಲಾಯಿತು. ಜೋಡುಕಟ್ಟೆಯಿಂದ ಆರಂಭಗೊಂಡ ಹೊರಕಾಣಿಕೆ ಮೆರವಣಿಗೆ ಹಳೆ ಡಯಾನ, ಕೆಎಂ ಮಾರ್ಗ, ತ್ರಿವೇಣಿ ಸರ್ಕಲ್, ಸಂಸ್ಕೃತ ಕಾಲೇಜು ಮೂಲಕ ಮುಖ್ಯ ರಸ್ತೆಯಲ್ಲಿ ಪುತ್ತಿಗೆ ಮಠಕ್ಕೆ ಸಾಗಿ ಬಂತು.


ತಟ್ಟಿರಾಯ, ನಾಸಿಕ್ ಬ್ಯಾಂಡ್, ವಾದ್ಯ, ಚಂಡೆ, ಸಿಡಿಮದ್ದು, ಮಹಿಳಾ ಭಜನಾ ತಂಡಗಳು ಮೆರವಣಿಗೆಯ ಮೆರುಗನ್ನು ಹೆಚ್ಚಿಸಿತು. ನೂರಾರು ಸ್ವಸಹಾಯ ಸಂಘದ ಪ್ರತಿನಿಧಿಗಳು ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ನೂರಾರು ವಾಹನಗಳಲ್ಲಿ ಅಕ್ಕಿ, ಬೆಲ್ಲ, ತೆಂಗಿನ ಕಾಯಿ, ವಿವಿಧ ತರಕಾರಿ ಸಹಿತ ವಿವಿಧ ಸಾಮಗ್ರಿಗಳನ್ನು ಪುತ್ತಿಗೆ ಮಠಕ್ಕೆ ಸಮರ್ಪಿಸಲಾಯಿತು.

ಮೆರವಣಿಗೆಯಲ್ಲಿ ಮಠದ ದಿವಾನ ನಾಗರಾಜ್ ಆಚಾರ್ಯ, ಪುತ್ತಿಗೆ ಮಠದ ಅಂತರಾಷ್ಟ್ರೀಯ ಕಾರ್ಯದರ್ಶಿ ಪ್ರಸನ್ನ ಆಚಾರ್ಯ, ಹೊರಕಾಣಿಕೆ ಅಧ್ಯಕ್ಷ ಬೈಕಾಡಿ ಸುಪ್ರಸಾದ್ ಶೆಟ್ಟಿ, ಪುತ್ತಿಗೆ ಸ್ವಾಗತ‌ ಸ್ವಾಮಿತಿಯ ಪದಾಧಿಕಾರಿಗಳು ಹಾಗೂ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಉಡುಪಿ ತಾಲೂಕಿನ ಪದಾಧಿಕಾರಿಗಳು, ಸೇವಾಪ್ರತಿನಿಧಿಗಳು, ಸದಸ್ಯರು ಉಪಸ್ಥಿತರಿದ್ದರು.