ಉಡುಪಿ, ಮೇ 18: ಮಳೆಗಾಲ ಸಮೀಪಿಸುತ್ತಿರುವ ಹಿನ್ನೆಲೆ, ನಗರಸಭಾ ವ್ಯಾಪ್ತಿಯ ಎಲ್ಲಾ ವಾರ್ಡ್ಗಳಲ್ಲಿ ಯಾವುದೇ ಆಸ್ತಿಪಾಸ್ತಿಗಳಿಗೆ ಹಾನಿಯಾಗದಂತೆ ಸಾಕಷ್ಟು ಮುಂಜಾಗೃತಾ ಕ್ರಮ ಕೈಗೊಳ್ಳುವಂತೆ ಉಡುಪಿ ನಗರಸಭೆಯ ಪ್ರಕಟಣೆ ತಿಳಿಸಿದೆ.
ಮಳೆಗಾಲದಲ್ಲಿ ಸಾಕಷ್ಟು ಸಾಂಕ್ರಾಮಿಕ ರೋಗಗಳು ಹರಡುವ ಸಂಭವವಿರುವುದರಿಂದ ಸುತ್ತಮುತ್ತ ಪರಿಸರವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು. ಗೂಡಂಗಡಿಗಳ ಮಾಲೀಕರು ತಮ್ಮಲ್ಲಿರುವ ಎಳನೀರು ಬೊಂಡವನ್ನು ಅದೇ ದಿನ ವಿಲೇವಾರಿ ಮಾಡಬೇಕು ಹಾಗೂ ಚರಂಡಿಗೆ ಕಸ ಕಡ್ಡಿ, ಪ್ಲಾಸ್ಟಿಕ್ ತ್ಯಾಜ್ಯ ಹಾಗೂ ಇತರೆ ಯಾವುದೇ ರೀತಿಯ ತ್ಯಾಜ್ಯಗಳನ್ನು ಎಸೆಯಬಾರದು. ಮಳೆಗಾಲದಲ್ಲಿ ನಿಂತ ನೀರಿನಿಂದ ಸೊಳ್ಳೆಗಳು ಉತ್ಪತ್ತಿಯಾಗುವ ಜೊತೆಗೆ ಅನೇಕ ಕಾಯಿಲೆಗಳು ದೇಹವನ್ನು ಬಾಧಿಸುವುದರಿಂದ ಮುಂಜಾಗೃತಾ ಕ್ರಮವಾಗಿ ಆರೋಗ್ಯದ ಹಿತದೃಷ್ಟಿಯಿಂದ ಗೃಹೋಪಯೋಗಕ್ಕೆಂದು ನೀರನ್ನು ಶೇಖರಿಸಿಡುವ ಸಿಮೆಂಟ್ ತೊಟ್ಟಿ, ಕಲ್ಲು ಚಪ್ಪಡಿಯಿಂದ ನಿರ್ಮಿಸಿದ ತೊಟ್ಟಿಗಳು, ಡ್ರಂ ಗಳು, ಬ್ಯಾರಲ್, ಮಡಕೆ ಮುಂತಾದ ಮೂಲಗಳಲ್ಲಿ ನೀರಿನ ಶೇಖರಣೆ ವೇಳೆ ಮುಂಜಾಗ್ರತೆ ವಹಿಸುವುದು ಅಗತ್ಯವಾಗಿದ್ದು, ನೀರು ಸಂಗ್ರಹವಾಗುವ ಓವರ್ ಹೆಡ್ ಟ್ಯಾಂಕ್‌ಗಳನ್ನು ವಾರಕ್ಕೊಮ್ಮೆ ಪೂರ್ತಿ ನೀರು ಖಾಲಿ ಮಾಡಿ ಸ್ವಚ್ಛಗೊಳಿಸಬೇಕು. ಮನೆ ಸುತ್ತಮುತ್ತ, ಅಂಗಡಿ ಮುಂಗಟ್ಟು, ಮನೆ ಪರಿಸರದಲ್ಲಿ ಇರುವ ಅನುಪಯುಕ್ತ ಟಯರ್, ಎಳನೀರು ಚಿಪ್ಪು, ಒಡೆದ ಬಾಟಲಿ ಮುಂತಾದವುಗಳಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಸ್ವಯಂ ರಕ್ಷಣಾ ವಿಧಾನಗಳಿಂದ ಸೊಳ್ಳೆ ನಿರೋಧಕಗಳನ್ನು ಹಾಗೂ ಸೊಳ್ಳೆ ಪರದೆಗಳನ್ನು ಉಪಯೋಗಿಸಬೇಕು.
ಯಾವುದೇ ಆರೋಗ್ಯ ಸಮಸ್ಯೆಗಳಿದ್ದರೆ ಕೂಡಲೇ ಹತ್ತಿರದ ವೈದ್ಯರನ್ನು ಭೇಟಿ ಮಾಡಿ ಸೂಕ್ತ ಚಿಕಿತ್ಸೆ ಪಡೆದುಕೊಳ್ಳಬೇಕು. ಕುಡಿಯಲು ಕಾಯಿಸಿ ಆರಿಸಿದ ನೀರನ್ನೇ ಉಪಯೋಗಿಸಬೇಕು. ಸಾರ್ವಜನಿಕರು ನೈಸರ್ಗಿಕವಾಗಿ ಹರಿಯುವ ನೀರಿಗೆ ಅಡ್ಡಿಪಡಿಸದೇ ಸರಾಗವಾಗಿ ನೀರು ಹರಿಯಲು ಅವಕಾಶ ಮಾಡಿಕೊಡುವ ಜೊತೆಗೆ ಮಳೆಗಾಲದಲ್ಲಿ ಯಾವುದೇ ಹಾನಿಯಾಗದಂತೆ ಮುಂಜಾಗೃತೆ ವಹಿಸುವಲ್ಲಿ ನಗರ ಸಭೆಯೊಂದಿಗೆ ಕೈಜೋಡಿಸುವಂತೆ ಪ್ರಕಟಣೆ ತಿಳಿಸಿದೆ.