ಉಡುಪಿ: ತ್ಯಾಜ್ಯಗಳನ್ನು ವಿಂಗಡಿಸಿ, ಸ್ಥಳೀಯ ಸಂಸ್ಥೆಗಳ ವಾಹನಗಳಿಗೆ ನೀಡಲು ಸೂಚನೆ

ಉಡುಪಿ: ಉಡುಪಿ ನಗರಸಭಾ ವ್ಯಾಪ್ತಿಯಲ್ಲಿ ಕಾರ್ಯಾಚರಿಸುತ್ತಿರುವ ಗೂಡಂಗಡಿ, ತಳ್ಳುಗಾಡಿ ಹಾಗೂ ಅಂಗಡಿ ಮಾಲೀಕರುಗಳು ತಮ್ಮಲ್ಲಿ ಉತ್ಪತ್ತಿಯಾಗುವ ತ್ಯಾಜ್ಯಗಳನ್ನು ವಿಂಗಡಿಸಿ, ಹಸಿಕಸ ಹಾಗೂ ಒಣಕಸಗಳಾಗಿ ಬೇರ್ಪಡಿಸಿ, ಶೇಖರಿಸಿ ನಗರ ಸ್ಥಳೀಯ ಸಂಸ್ಥೆಯ ವಾಹನಗಳಿಗೆ ನೀಡಬೇಕು ಹಾಗೂ ರಸ್ತೆ ಬದಿ ಓಡಾಡುವ ಹಿರಿಯ ನಾಗರಿಕಕರು, ವಿದ್ಯಾರ್ಥಿಗಳು, ಪಾದಾಚಾರಿಗಳಿಗೆ ಮತ್ತು ವಾಹನ ಸಂಚಾರಿಗಳಿಗೆ ಅಡ್ಡಿಪಡಿಸದೇ ವ್ಯವಹಾರ ಮಾಡಬೇಕು.

ನಿಷೇಧಿತ ಏಕಬಳಕೆ ಪ್ಲಾಸ್ಟಿಕ್ ಬದಲಿಗೆ ಪೇಪರ್ ಕವರ್, ಹಳೆ ದಿನಪತ್ರಿಕೆ, ಬಟ್ಟೆ ಬ್ಯಾಗ್‌ಗಳನ್ನು ಬಳಸಬೇಕು. ಪ್ರತಿ ಅಂಗಡಿ ಮುಂದೆ ಡಸ್ಟ್ಬಿನ್ ಇಟ್ಟು, ಚಾಕಲೇಟ್ ಪೇಪರ್, ಗುಟ್ಕ ಪ್ಯಾಕೇಟ್, ಬಾಳೆಹಣ್ಣು ಸಿಪ್ಪೆ ಇತ್ಯಾದಿಗಳನ್ನು ಉಪಯೋಗಿಸಿ ಬಿಸಾಡುವಂತಹ ವಸ್ತುಗಳನ್ನು ಡಸ್ಟ್ಬಿನ್ ಗೆ ಹಾಕಲು ಪ್ರತೀ ಗ್ರಾಹಕರಿಗೆ ಸೂಚಿಸಬೇಕು. ಗೂಡಂಗಡಿಗಳಲ್ಲಿ ವಸ್ತುಗಳನ್ನು ಬಿಡಿಬಿಡಿಯಾಗಿ ಮಾರಾಟ ಮಾಡುವುದನ್ನು ಸರಕಾರ ನಿಷೇಧಿಸಿರುತ್ತದೆ.

ಆದ್ದರಿಂದ ಈ ಎಲ್ಲಾ ಸೂಚನೆಗಳನ್ನು ಪ್ರತಿ ಅಂಗಡಿ, ಗೂಡಂಗಡಿ, ತಳ್ಳುಗಾಡಿಯವರೂ ತಪ್ಪದೇ ಪಾಲಿಸಿ, ಸಾರ್ವಜನಿಕ ಆರೋಗ್ಯ ಕಾಪಾಡಲು ನಗರಸಭೆಯೊಂದಿಗೆ ಸಹಕರಿಸುವಂತೆ ನಗರಸಭೆ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.