ಉಡುಪಿ:ಕೇವಲ ಶ್ರೀಮಂತರ ಆಟ ಎಂದೇ ಕರೆಯಲ್ಪಡುವ ಟೆನ್ನಿಸ್ ಇಂದು ಶ್ರೀಸಾಮಾನ್ಯರು ಆಡುವ ಕ್ರೀಡೆಯಾಗಿ ಬದಲಾಗಿದೆ. ಯಾಕೆಂದರೆ, ಸಮಾಜ ಇಂದು ಕ್ರೀಡೆಯನ್ನು ನೋಡುತ್ತಿರುವ ದೃಷ್ಟಿಕೋನ ಬದಲಾಗಿದೆ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕರಾದ ಡಾ. ಜೆರಾಲ್ಡ್ ಸಂತೋಷ್ ಡಿಸೋಜಾ ಹೇಳಿದರು.
ಇವರು ಡಾ. ಜಿ. ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ಅಜ್ಜರಕಾಡು ಉಡುಪಿ ಇಲ್ಲಿನ ದೈಹಿಕ ಶಿಕ್ಷಣ ವಿಭಾಗ, ಮತ್ತು ಉಡುಪಿ ಜಿಲ್ಲಾ ಲಾನ್ ಟೆನ್ನಿಸ್ ಸಂಘ ಇವರ ಸಹಯೋಗದಲ್ಲಿ ಜಿಲ್ಲಾ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ವಿಶ್ವವಿದ್ಯಾನಿಲಯ ಮಟ್ಟದ ಅಂತರ್ ಕಾಲೇಜು ಪುರುಷರ ಮತ್ತು ಮಹಿಳೆಯರ ಟೆನ್ನಿಸ್ ಪಂದ್ಯಾವಳಿಯ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಪಂದ್ಯಾಕೂಟವನ್ನು ಅನುಭವಿ ಮತ್ತು ಅನ್ಮೋಲ್ ಟೆನ್ನಿಸ್ ಪ್ರಚಾರಕರಾದ ಶಶಿಧರ್ ಕಿದಿಯೂರು ಉದ್ಘಾಟಿಸಿ ಶುಭಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಪ್ರೊ ಭಾಸ್ಕರ್ ಶೆಟ್ಟಿ ಎಸ್ ಇವರು ವಹಿಸಿದ್ದರು. ಡಾ. ರೋಶಣ್ ಕುಮಾರ್ ಶೆಟ್ಟಿ ಕಾರ್ಯದರ್ಶಿ ಉಡುಪಿ ಜಿಲ್ಲಾ ಲಾನ್ ಟೆನ್ನಿಸ್ ಸಂಘ, ಡಾ. ರೋಶನ್ ಶೆಟ್ಟಿ ಸಹಾಯಕ ನಿರ್ದೇಶಕರು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಉಡುಪಿ ಮತ್ತು ಕಾಲೇಜಿನ ಐ.ಕ್ಯೂ.ಎ.ಸಿ ಸಂಚಾಲಕರಾದ ಸೋಜಾನ್. ಕೆ ಇವರು ಉಪಸ್ಥಿತರಿದ್ದರು.
ಡಾ. ರಾಮಚಂದ್ರ ಪಾಟ್ಕರ್ ದೈಹಿಕ ಶಿಕ್ಷಣ ನಿರ್ದೇಶಕರು ಸ್ವಾಗತಿಸಿದರು. ಕಾರ್ಯಕ್ರಮವನ್ನು ಡಾ. ರಾಜೇಂದ್ರ ಉಪನ್ಯಾಸಕರು ರಾಜ್ಯಶಾಸ್ತ್ರ ವಿಭಾಗ ನಿರೂಪಿಸಿ ವಂದಿಸಿದರು.