ಉಡುಪಿ: ಜನ ಸಾಮಾನ್ಯರಿಗೆ ಉತ್ತಮ ಆರೋಗ್ಯ ಸೇವೆಗಳನ್ನು ಒದಗಿಸಿ ಜಿಲ್ಲೆ ರಾಜ್ಯಕ್ಕೆ ಮಾದರಿಯಾಗಬೇಕು – ಸಚಿವ ದಿನೇಶ್ ಗುಂಡೂರಾವ್

ಉಡುಪಿ: ಜನ ಸಾಮಾನ್ಯರಿಗೆ ಜಿಲ್ಲೆಯ ಆರೋಗ್ಯ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಉತ್ತಮ ಆರೋಗ್ಯ ಸೇವೆಗಳನ್ನು ಒದಗಿಸುವುದರೊಂದಿಗೆ ಹೆಚ್ಚಿನ ಪ್ರಗತಿ ಸಾಧಿಸಿ ಬೇರೆ ಜಿಲ್ಲೆಗೆ ಮಾದರಿಯಾಗಬೇಕು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ದಿನೇಶ್ ಗುಂಡೂರಾವ್ ಅವರು ತಿಳಿಸಿದರು.

ಅವರು ಇಂದು ನಗರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳ ಕಛೇರಿಯಲ್ಲಿ ಆರೋಗ್ಯ ಇಲಾಖೆಯ ಪ್ರಗತಿ ಪರಿಶೀಲನ ನಡೆಸಿ ಮಾತನಾಡುತ್ತಿದ್ದರು.

ಸಾರ್ವಜನಿಕರಿಗೆ ಉತ್ತಮ ಆರೋಗ್ಯ ಸೇವೆಗಳನ್ನು ಒದಗಿಸಬೇಕೇಂಬುದೇ ಸರ್ಕಾರದ ಆಶಯವಾಗಿದ್ದು, ಆರೋಗ್ಯ ಸುಧಾರಣೆಗೆ ಅನೇಕ ಹೊಸ ಹೊಸ ಯೋಜನೆಗಳು ಹಾಗೂ ಕಾರ್ಯಕ್ರಮಗಳನ್ನು ಜಾರಿಗೆ ತಂದಿದೆ. ರೋಗಿಗಳಿಗೆ ಉಚಿತ ಔಷದೋಪಾಯಗಳನ್ನು ಒದಗಿಸಲು ಔಷದಿಗಳ ವಿತರಣಾ ವ್ಯವಸ್ಥೆಯಲ್ಲಿ ಸುಧಾರಣೆ ಕೈಗೊಳ್ಳಲಾಗುತ್ತಿದೆ ಪ್ರತಿ ತಾಲೂಕುಗಳಿಗೂ 108 ಅಂಬುಲೆನ್ಸ್ ಗಳನ್ನು ಹೊಸದಾಗಿ ನೀಡುವುದರೊಂದಿಗೆ ಅವುಗಳ ನಿರ್ವಾಹಣೆಗೂ ಸುಧರಣೆ ತರಲಾಗುತ್ತಿದೆ ಇವುಗಳ ಜೊತೆಗೆ ಸಹಾಯವಾಣಿಯನ್ನು ತೆರೆಯಲು ಸಹ ಮುಂದಾಗಿದ್ದೇವೆ ಎಂದರು.

ಎಂಡೋಸಲ್ಪಾನ್ ಪೀಡಿತರಿಗೆ ಸೂಕ್ತ ಚಿಕಿತ್ಸೆ ನೀಡಲು ಕೆರಿಂಗ್ ಸೆಂಟರ್ ಅನ್ನು ಪಿಪಿಪಿ ಮಾಡಲು ಅಥವಾ ಸರ್ಕಾರದ ವತಿಯಿಂದಲೇ ಜಿಲ್ಲೆಯಲ್ಲಿ ತೆರೆಯಲು ಕ್ರಮ ತೆಗೆದುಕೊಳ್ಳಬೇಕು ಎಂದು ಸೂಚಿಸಿದ ಅವರು ಎಂಡೋಸಲ್ಪನ್ ಪೀಡಿತರ ಆರೋಗ್ಯ ಮೇಲಿಸ್ತುವಾರಿ ಪ್ರೋಗ್ರಾಮ್ ಆಫೀಸರ್ ಹಾಗೂ ವಾಹನದ ಬೇಡಿಕೆ ಇದೆ ಈ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದರು.

ಜಿಲ್ಲೆಯಲ್ಲಿ ಕ್ಷಯರೋಗದ ನಿಯಂತ್ರಣ ಹಾಗೂ ಚಿಕೆತ್ಸೆಯ ನಿರ್ವಹಣೆಗೆ ಅಗತ್ಯವಿರುವ ಯಂತ್ರೋಪಕರಣಗಳು ಹಾಗೂ ವಾಹನದ ಬೇಡಿಕೆ ಇದೆ ಇವುಗಳನ್ನು ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದ ಅವರು ತಜ್ಞ ವೈದ್ಯರು ಸೇರಿದಂತೆ ಮತ್ತಿತರ ವೈದ್ಯರುಗಳನ್ನು ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ತಾತ್ಕಲಿಕವಾಗಿ ತೆಗೆದುಕೊಳ್ಳಲು ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣಧಿಕಾರಿಗಳಿಗೆ ಸೂಚನೆ ನೀಡಿದರು.

ಪ್ರಯೋಗಾಲಯದ ಅಧಿಕಾರಿಗಳು, ಶ್ರುಶ್ರೂಕರ ಹುದ್ದೆಗಳು ಜಿಲ್ಲೆಯಲ್ಲಿ ಖಾಲಿ ಇವೆ ಎಂದು ತಿಳಿದು ಬಂದಿದೆ, ರಾಜ್ಯ ಮಟ್ಟದಲ್ಲಿ 800 ಹುದ್ದೆಗಳನ್ನು ಭರ್ತಿ ಪ್ರಕ್ರಿಯೆ ಚಾಲನೆಯಲ್ಲಿದ್ದು ಶೀಘ್ರದಲ್ಲಿಯೇ ಪೂರ್ಣಗೊಳ್ಳಲಿದ್ದು ಆ ಸಂದರ್ಭದಲ್ಲಿ ಜಿಲ್ಲೆಗೆ ಅವಶ್ಯವಿರುವ ಸಿಬ್ಬಂದಿಗಳನ್ನು ನಿಯೋಜಿಸಲಾಗುವುದು ಎಂದರು.

ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಫಲಾನುಭವಿಗಳಿಗೆ ಆರೋಗ್ಯ ಸೇವೆಗಳು ಪ್ರತಿಯೊಬ್ಬರಿಗೂ ಲಭಿಸುವಂತೆ ಕ್ರಮ ವಹಿಸಬೇಕು. ಅಪಘಾತದಂತಹ ತುರ್ತು ಸಂದರ್ಭದಲ್ಲಿ ಪ್ರಾಣ ಉಳಿಯುವಿಕೆಗೆ ಚಿಕಿತ್ಸೆಯನ್ನು ಅದ್ಯತೆಯ ಮೇಲೆ ಆಸ್ಪತ್ರೆಗಳು ನೀಡಬೇಕು. ಇದನ್ನು ಉಲ್ಲಂಘಿಸಿದಲ್ಲಿ ಕೆ.ಪಿ.ಎಂ ನ ಅಡಿಯಲ್ಲಿ ಕ್ರಮ ಕೈಗೊಳ್ಳಬೇಕು ಎಂದರು.ಶಾಸಕ ಯಶ್‌ಪಾಲ್ ಎ ಸುವರ್ಣ ಮಾತನಾಡಿ, ನಗರದ ತಾಯಿ ಮತ್ತು ಮಕ್ಕಳ ಆಸ್ಪತ್ರೆ ನಿರ್ವಹಣೆಗೆ ಅಗತ್ಯವಿರುವ ಅನುದಾನವನ್ನು ಒದಗಿಸುವಂತೆ ಹಾಗೂ ಬ್ರಹ್ಮಾವರದ ಸಮುದಾಯ ಆರೋಗ್ಯ ಕೇಂದ್ರವನ್ನು ಉನ್ನತ ದರ್ಜೆಗೆ ಏರಿಸಬೇಕು ಹಾಗೂ ಖಾಲಿ ಇರುವ ಅಂಬುಲೆನ್ಸ್ ಚಾಲನೆಗೆ ಅವಶ್ಯಕತೆ ಇರುವ ಡೈವರ್‌ಗಳನ್ನು ಒದಗಿಸಬೇಕು ಎಂದರು.

ಶಾಸಕ ಗುರುರಾಜ್ ಶೆಟ್ಟಿ ಗಂಟಿಹೊಳೆ ಮಾತನಾಡಿ, ಬೈಂದೂರಿಗೆ ತಾಲೂಕು ಮಟ್ಟದ ಆಸ್ಪತ್ರೆ ಕೊಲ್ಲೂರು ಹಾಗೂ ಸಿದ್ದಾಪುರದಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಉನ್ನತಿಕರಣಗೊಳಿಸಬೇಕು ಹಾಗೂ ಬೈಂದೂರಿನಲ್ಲಿ ಹಾಲಿ ಇರುವ ಆಸ್ಪತ್ರೆಗೆ ಡಯಾಲಿಸಿಸ್ ಘಟಕಗಳನ್ನು ತೆರೆಯಬೇಕು ಎಂದರು.ಸಭೆಯಲ್ಲಿ ಕಿರಣ್ ಕುಮಾರ್ ಕೊಡ್ಗಿ,ಜಿಲ್ಲಾಧಿಕಾರಿ ಡಾ. ಕೆ ವಿದ್ಯಾ ಕುಮಾರಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಆಯುಕ್ತ ಡಿ ರಂದೀಪ, ಆರೋಗ್ಯ ಇಲಾಖೆಯ ನಿರ್ದೇಶಕಿ ಪುಷ್ಪಲತಾ ಬಿ. ಎಸ್, ಆರೋಗ್ಯ ಇಲಾಖೆಯ ಜಂಟಿ ನಿರ್ದೇಶಕಿ ಡಾ.ರಾಜೇಶ್ವರಿ, ಜಿಲ್ಲಾ ಸರ್ಜನ್ ಡಾ. ವೀಣಾ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಐ.ಪಿ ಗಡಾದ್, ಆರೋಗ್ಯ ಇಲಾಖೆಯ ಜಿಲ್ಲಾ ಮಟ್ಟದ ಅನುಷ್ಠಾನಾಧಿಕಾರಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.