ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ: ಭರ್ಜರಿ ಗೆಲುವು ಸಾಧಿಸಿದ ಕೋಟ ಶ್ರೀನಿವಾಸ್ ಪೂಜಾರಿ.

ಉಡುಪಿ: ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ್ ಪೂಜಾರಿ ಅವರು ಕಾಂಗ್ರೆಸ್‌ನ ಜಯಪ್ರಕಾಶ್ ಹೆಗ್ಡೆ ಅವರನ್ನು ಸೋಲಿಸಿ ಭರ್ಜರಿ ಅಂತರದೊಂದಿಗೆ ಗೆಲುವು ಸಾಧಿಸಿದ್ದು, ದಕ್ಷಿಣ ಕನ್ನಡ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಕ್ಯಾಪ್ಟನ್‌ ಬ್ರಿಜೇಶ್ ಅವರು ಕಾಂಗ್ರೆಸ್ ಅಭ್ಯರ್ಥಿ ಆರ್‌ ಪದ್ಮರಾಜ್‌ ಅವರನ್ನು ಸೋಲಿಸಿದ್ದಾರೆ.

ಉಡುಪಿಯಲ್ಲಿ ಗೆಲುವಿನ ಸಂಭ್ರಮಾಚರಣೆ:

ಮತ ಎಣಿಕೆ ಪ್ರಕ್ರಿಯೆ ಆರಂಭವಾದಾಗಿನಿಂದಲೂ ಕೋಟ ಶ್ರೀನಿವಾಸ್ ಪೂಜಾರಿ ಅವರು ಸತತವಾಗಿ ಮುನ್ನಡೆ ಸಾಧಿಸಿದ್ದರು. ಇದೀಗ ಅಂತಿಮವಾಗಿ ಕಾಂಗ್ರೆಸ್ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ ಅವರನ್ನು ಸೋಲಿಸುವ ಮೂಲಕ ಕೋಟ ಶ್ರೀನಿವಾಸ್ ಪೂಜಾರಿ ಅವರು ಗೆಲುವಿನ ನಗೆ ಬೀರಿದ್ದಾರೆ.
ಮತ್ತೆ ಅಭೂತಪೂರ್ವ ಮುನ್ನಡೆ ಸಾಧಿಸಿರುವ ಕೋಟ ಶ್ರೀನಿವಾಸ ಪೂಜಾರಿ ಅವರು, 7,27,393 ಮತಗಳನ್ನು ಪಡೆದಿದ್ದು, ಕಾಂಗ್ರೆಸ್‌ನ ಜಯಪ್ರಕಾಶ್ ಹೆಗ್ಡೆ ಅವರು 4,70,215 ಮತಗಳನ್ನು ಗಳಿಸಿದ್ದಾರೆ. ಈ ಮೂಲಕ ಕೋಟ ಶ್ರೀನಿವಾಸ್ ಪೂಕಾರಿ ಅವರು 2,57,178 ಮತಗಳ ಮುನ್ನಡೆ ಸಾಧಿದ್ದಾರೆ. ಜೊತೆಗೆ ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ 11,223 ರಷ್ಟು ಮತಗಳು ನೋಟಾ ಬಂದಿವೆ. ಉಡುಪಿಯಲ್ಲಿ ಕೋಟ ಶ್ರೀನಿವಾಸ್ ಪೂಜಾರಿ ಅವರ ಭರ್ಜರಿ ಗೆಲುವುವನ್ನು ಕಾರ್ಯಕರ್ತರು ಸಂಭ್ರಮಿಸಿದ್ದಾರೆ.

ಬಿಜೆಪಿಯ ಭದ್ರಕೋಟೆಯಲ್ಲಿ ಮತ್ತೆ ಅರಳಿದ ಕಮಲ:
ದಕ್ಷಿಣ ಕನ್ನಡ ಕ್ಷೇತ್ರದಲ್ಲಿ ಕಳೆದ ಕೆಲವು ದಶಕಗಳಿಂದ ಬಿಜೆಪಿಯ ಭದ್ರಕೋಟೆಯಲ್ಲಿ ಮತ್ತೆ ಕಮಲ ಅರಳಿದೆ. ಕಳೆದ 8 ಚುನಾವಣೆಗಳಲ್ಲಿ ಗೆಲುವಿನ ಪತಾಕೆ ಹಾರಿಸಿರುವ ಬಿಜೆಪಿಯೂ ಈ ಬಾರಿಯೂ ಗೆಲುವಿನ ನಗೆ ಬೀರಿದೆ. ಬಿಜೆಪಿ ಅಭ್ಯರ್ಥಿ ಕ್ಯಾಪ್ಟನ್‌ ಬ್ರಿಜೇಶ್ ಅವರು ಕಾಂಗ್ರೆಸ್ ಅಭ್ಯರ್ಥಿ ಆರ್‌ ಪದ್ಮರಾಜ್‌ ಅವರನ್ನು ಸೋಲಿಸಿದ್ದಾರೆ. ರಾಜ್ಯದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್‌ ಈ ಬಾರಿಯಾದರೂ ಈ ಕ್ಷೇತ್ರವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಬೇಕು ಎಂದು ಪಣತೊಟ್ಟಿತ್ತು. ಹೀಗಾಗಿ ಈ ಬಾರಿ ಬಿಜೆಪಿಯೂ ಕಾಂಗ್ರೆಸ್‌ನಿಂದ ಪ್ರಬಲ ಸ್ಪರ್ಧೆಯನ್ನು ಎದುರಿಸಿತ್ತು. ಮಂಗಳೂರಿನಲ್ಲಿ ಪ್ರಧಾನಿ ಮೋದಿ ರೋಡ್ ರೋ ವರ್ಕೌಟ್ ಆಗಿದ್ದು ಬ್ರಿಜೇಶ್ ಗೆಲುವು ಸಾಧಿಸುವುದರ ಮೂಲಕ ದೆಹಲಿಗೆ ಹಾರಲು ತಯಾರಾಗಿದ್ದಾರೆ.