“ಉಡುಪಿಯಲ್ಲಿ ವೈದ್ಯ ಸಾಹಿತ್ಯ ಸಮ್ಮೇಳನ”

ಭಾರತೀಯ ವೈದ್ಯಕೀಯ ಸಂಘ ಉಡುಪಿ ಕರಾವಳಿ ಶಾಖೆಯಿಂದ ತಾರೀಕು 3 -5 -2026 ರವಿವಾರ ಉಡುಪಿಯ ಐಎಂಎ ಭವನದಲ್ಲಿ ಉಡುಪಿ ಕುಂದಾಪುರ ಹಾಗೂ ಕಾರ್ಕಳ ತಾಲೂಕನ್ನು ಒಳಗೊಂಡ ಐಎಂಎ ಸದಸ್ಯ ಸಾಹಿತಿಗಳನ್ನು ಒಗ್ಗೂಡಿಸಿಕೊಂಡು ಉಡುಪಿ ಜಿಲ್ಲಾ ವೈದ್ಯ ಸಾಹಿತ್ಯ ಸಮ್ಮೇಳನವು ಜರಗಿತು. ಅಪರಾಹ್ನ ಮೂರುಗಂಟೆಗೆ ಚಹಾದೊಂದಿಗೆ ಸಾಹಿತ್ಯಿಕ ಹರಟೆ ಕಾರ್ಯಕ್ರಮದೊಂದಿಗೆ ಆರಂಭವಾದ ಸಮ್ಮೇಳನದಲ್ಲಿ ಮೊತ್ತ ಮೊದಲಿಗೆ ಉಡುಪಿಯ ವೈದ್ಯ ಸಾಹಿತಿಗಳೇ ಬರೆದು ಪ್ರಕಟಿಸಿರುವ 60ಕ್ಕೂ ಹೆಚ್ಚು ಪುಸ್ತಕಗಳ ಪ್ರದರ್ಶನವನ್ನು ಉದ್ಘಾಟಿಸಲಾಯಿತು. ಇದರ ಉಸ್ತುವಾರಿಯನ್ನು ಉಡುಪಿಯ ಹಿರಿಯ ಮೂತ್ರರೋಗ ಶಸ್ತ್ರಚಿಕಿತ್ಸಾ ತಜ್ಞ ಡಾ. ಪುರುಷೋತ್ತಮ ಆಚಾರ್ಯ ಇವರು ನಿರ್ವಹಿಸಿದ್ದರು. ನಂತರ ನಡೆದ ಸಮ್ಮೇಳನದ ಉದ್ಘಾಟನಾ ಕಾರ್ಯಕ್ರಮದಲ್ಲಿ ಉದ್ಘಾಟಕರಾಗಿ ಖ್ಯಾತ ಸಾಹಿತಿ ಐ ಎಂ ಎ ಬರಹಗಾರರ ಸಮಿತಿಯ ರಾಜ್ಯ ಅಧ್ಯಕ್ಷ್ಯೆ ಡಾ. ಇಂದಿರಾ ದೊಡ್ಡ ಬಳ್ಳಾಪುರ, ಐಎಂಎ ರಾಜ್ಯ ಉಪಾಧ್ಯಕ್ಷ ಡಾ. ಅಣ್ಣಯ್ಯ ಕುಲಾಲ್, ಕಾರ್ಕಳ ಸಂಘದ ಅಧ್ಯಕ್ಷ ಡಾ ದಿಶಾ ಕಿಶನ್ ಆಗಮಿಸಿದ್ದರು.ಡಾ. ಸಂದೀಪ್ ಹಾಗೂ ಡಾ. ಮೇಘಾ ಪೈ ಇವರ ಪ್ರಾರ್ಥನೆಯೊಂದಿಗೆ ಆರಂಭವಾದ ಸಮ್ಮೇಳನಕ್ಕೆ ಸಮ್ಮೇಳನ ಸಮಿತಿಯ ಅಧ್ಯಕ್ಷ ಉಡುಪಿಯ ಹಿರಿಯ ಶಸ್ತ್ರಚಿಕಿತ್ಸಾ ತಜ್ಞ ಡಾ. ವೈ ಸುದರ್ಶನ ರಾವ್ ಪ್ರಾಸ್ತಾವಿಕವಾಗಿ ಮಾತನಾಡಿ ಎಲ್ಲರನ್ನು ಸ್ವಾಗತಿಸಿದರು. ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದ ಡಾ. ಇಂದಿರಾ ದೊಡ್ಡಬಳ್ಳಾಪುರ ಇವರು ನಾವು ರೋಗಿಯ ಕಾಯಿಲೆ ಮಾತ್ರವಲ್ಲದೆ ಸಾಮಾಜಿಕ ಹಿನ್ನೆಲೆಯನ್ನೂ ಚಿಕಿತ್ಸೆಗೆ ಪರಿಗಣಿಸುವುದರಿಂದ ಪ್ರತಿಯೊಂದು ಅನುಭವವೂ ಕಥಾವಸ್ತು ಎಂದು ಹೇಳಿದರು. ಡಾ ಅಣ್ಣಯ್ಯ ಕುಲಾಲ್ ಮಾತನಾಡಿ ಉಡುಪಿಯವರು ಅಚ್ಚರಿಯ ಪ್ರಥಮ ನೀಡುವುದರಲ್ಲಿ ಯಾವತ್ತೂ ಮುಂದೆ ಎಂದು ಹೇಳಿ ಪ್ರಪ್ರಥಮ ವೈದ್ಯ ಸಾಹಿತ್ಯ ಸಮ್ಮೇಳನಕ್ಕೆ ಶುಭ ಕೋರಿದರು. ಡಾ. ದಿಶಾ ಕಿಶನ್ ರವರು ಮಾತನಾಡಿ ಕಾರ್ಕಳ ಸಂಘವು ಈ ಐತಿಹಾಸಿಕ ಕಾರ್ಯಕ್ರಮದಲ್ಲಿ ಸಹಭಾಗಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು. ನಂತರ ವೈದ್ಯರಿಂದ ಸ್ವರಚಿತ ಕವನ ವಾಚನ, ಶ್ರೀ ಮನು ಹಂದಾಡಿ ಇವರಿಂದ ಹಾಸ್ಯ ಸಂಜೆ ,ಶಿವಮೊಗ್ಗದ ಖ್ಯಾತ ಮಾನಸಿಕ ತಜ್ಞೆ ಡಾ. ಪವಿತ್ರ ಕೆ ಎಸ್ ಇವರಿಂದ ಮಾತು ನೃತ್ಯ ಪ್ರಾತ್ಯಕ್ಷಿಕೆಗಳನ್ನೊಳಗೊಂಡ ಕಾರ್ಯಾಗಾರ, ಹಾಗೂ ವೈದ್ಯ ಪುಸ್ತಕ ಪ್ರಕಾಶಕರ ಚರ್ಚಾ ಗೋಷ್ಠಿ ನಡೆಯಿತು.ಈ ಕಾರ್ಯಕ್ರಮಗಳನ್ನು ಖ್ಯಾತ ಮಾನಸಿಕ ತಜ್ಞ ಡಾ. ಪಿ. ವಿ ಭಂಡಾರಿ. ಖ್ಯಾತ ಸ್ತ್ರೀರೋಗ ತಜ್ಞೆ ಹಾಗೂ ಸಾಹಿತಿ ಡಾ. ರಾಜಲಕ್ಷ್ಮಿ ಯುವ ವೈದ್ಯ ರೇಡಿಯೋಲಜಿಸ್ಟ್ ಡಾ. ಪ್ರವೀಣ್ ಶಾಸ್ತ್ರಿ, ಹಿರಿಯ ಶ್ ಸ್ತ್ರೀರೋಗ ತಜ್ಞೆ ಡಾ. ವಿಜಯ ವೈ .ಬಿ ಇವರು ನಡೆಸಿಕೊಟ್ಟರು. ಚರ್ಚಾ ಗೋಷ್ಠಿಯಲ್ಲಿ ಮಣಿಪಾಲ ಕೆಎಂಸಿಯ ಹಿರಿಯ ಶಸ್ತ್ರಚಿಕಿತ್ಸಾ ತಜ್ಞ ಪ್ರೊ.ಡಾ. ರಾಜಗೋಪಾಲ್ ಶೆಣೈ, ಕೋಟೇಶ್ವರದ ಎನ್ ಆರ್ ಆಚಾರ್ಯ ಸ್ಮಾರಕ ಆಸ್ಪತ್ರೆಯ ನಿರ್ದೇಶಕ ಡಾ. ಭಾಸ್ಕರ್ ಆಚಾರ್ಯ, ಕೆಎಂಸಿ ಮಣಿಪಾಲ ಇದರ ನಿವೃತ್ತ ಪ್ಪ್ರೊಫೆಸರ್ ಡಾ. ತಾರಾ ಶಾನುಭಾಗ್, ಮಣಿಪಾಲ ಕೆಎಂಸಿಯ ಅಕ್ಷಿ ವಿಭಾಗದ ಪ್ರೊಫೆಸರ್ ಡಾ. ಸುಲತಾ ಭಂಡಾರಿ, ಖ್ಯಾತ ಮಾನಸಿಕ ತಜ್ಞ ಹಾಗೂ ಸಾಹಿತಿ ಡಾ. ವಿರೂಪಾಕ್ಷ ದೇವರುಮನೆ ಹಾಗೂ ಗೋವಿಂದ ಪೈ ಸಂಶೋಧನಾ ಕೇಂದ್ರದ ಶ್ರೀಮತಿ ಸವಿತಾ ಶಾಂತ ಪ್ರಿಯ ಇವರು ಭಾಗವಹಿಸಿದ್ದರು. ಸಮಾರೋಪ ಸಮಾರಂಭದಲ್ಲಿ ಅತಿಥಿಗಳಾಗಿ ಐ ಎಂ ಎ ಉಡುಪಿ ಜಿಲ್ಲಾ ಸಂಯೋಜಕ ಉಮೇಶ್ ಪುತ್ರನ್ ಹಾಗೂ ಕುಂದಾಪುರ ಸಂಘದ ಅಧ್ಯಕ್ಷ ಡಾ ಶಶಿಧರ್ ಎಸ್ ಬಿ ಭಾಗವಹಿಸಿದ್ದರು. ಕಥಾ ಸ್ಪರ್ಧೆ ಹಾಗೂ ಕವನ ಸ್ಪರ್ಧೆಯ ವಿಜೇತರಾದ ಡಾ. ವತ್ಸಲ ರಾವ್ ಡಾ. ಪ್ರಕಾಶ್ ಕುಮಾರ್ ಶೆಟ್ಟಿ, ಡಾ. ಶಶಿಕಿರಣ್ ಕುಮಾರ್ ಸರೋಜ ರಾವ್ ಹಾಗೂ ಮಾಸ್ಟರ್ ಶ್ರೀಹಾನ್ ರವರಿಗೆ ಬಹುಮಾನವನ್ನು ಅತಿಥಿಗಳು ನೀಡಿದರು. ಹಿರಿಯ ಸ್ತ್ರೀರೋಗ ತಜ್ಞೆ ಹಾಗೂ ವೈದ್ಯ ಸಾಹಿತಿ ಡಾ ಸಾವಿತ್ರಿ ದೈತೋಟ ಹಾಗೂ ಉಡುಪಿ ತಾಲೂಕು ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಹಾಗೂ ಹಿರಿಯ ಹಸ್ತ ಶಸ್ತ್ರಚಿಕಿತ್ಸಾ ತಜ್ಞ ಡಾ. ಭಾಸ್ಕರಾನಂದ ಕುಮಾರ್ ಇವರಿಗೆ ಗೌರವಾರ್ಪಣೆ ಕಾರ್ಯಕ್ರಮ ನಡೆಯಿತು. ಸಮ್ಮೇಳನದ ಸಂಚಾಲಕಿ ಡಾ. ವಿಜಯ ವೈ ಬಿ ಸನ್ಮಾನವನ್ನು ನಿರ್ವಹಿಸಿದರು. ಉಡುಪಿಯ ಹಿರಿಯ ಮಕ್ಕಳ ತಜ್ಞ ಹಾಗೂ ಐಎಂಎ ಉಡುಪಿ ಕರಾವಳಿ ಇದರ ಅಧ್ಯಕ್ಷ ಡಾ. ಅಶೋಕ್ ಕುಮಾರ್ ಕಾಮತ್ ಸಮಾವೇಶದ ಸರ್ವಾಧ್ಯಕ್ಷರಾಗಿ ಉಡುಪಿಯು ಶ್ರೀ ಮಧ್ವಾಚಾರ್ಯರ ಕಾಲದಿಂದಲೂ ಕಲೆ ಹಾಗೂ ಸಂಸ್ಕೃತಿಗಳ ನೆಲೆವೀಡು ಎಂದು ನುಡಿದರು. ಕಾರ್ಯದರ್ಶಿ ಮನೋರೋಗ ತಜ್ಞ ಡಾ. ಮಾನಸ್ ಧನ್ಯವಾದ ವಿತ್ತರು. ಕೋಶಾಧಿಕಾರಿ ಚರ್ಮರೋಗ ತಜ್ಞ ಡಾ. ಸನತ್ ರಾವ್, ಮಣಿಪಾಲ ಕೆ ಎಂ ಸಿ ಯ ಪ್ರೊಫೆಸರ್ ಡಾ. ಮಮತಾ ಹಾಗೂ ಸುನಾಗ್ ಆಸ್ಪತ್ರೆಯ ಅರಿವಳಿಕೆ ತಜ್ಞೆ ಡಾ. ವೀಣಾ ನರೇಂದ್ರ ಹಾಗೂ ಸ್ತ್ರೀರೋಗ ತಜ್ಞೆ ಡಾ ರಂಜಿತಾ ನಿರೂಪಿಸಿದರು.