ಈ ಬಾರಿ ಅಂಧ ಮತದಾರರಿಗೆ ಮತದಾನ ಸುಲಭ

ಚುನಾವಣೆಯಲ್ಲಿ ಎಲ್ಲರನ್ನೂ ಒಳಗೊಳ್ಳುವ ಚುನಾವಣಾ ಆಯೋಗದ ಆಶಯದಂತೆ, ಈ ಬಾರಿ ಅಂಧ ಮತದಾರರಿಗೆ ಅನುಕೂಲವಾಗುವಂತೆ ಬ್ರೈಲ್ ಮತಪತ್ರವನ್ನು ಸಿದ್ದಪಡಿಸಲಾಗಿದ್ದು, ಅಂಧ ಮತದಾರರು ಸ್ವತ: ತಾವೇ ಕಣದಲ್ಲಿರುವ ಅಭ್ಯರ್ಥಿಗಳನ್ನು ಗುರುತಿಸಿ ಮತ ಚಲಾಯಿಸಬಹುದಾಗಿದೆ.

ಅಂಧ ಮತದಾರರು ಮತ ಚಲಾಯಿಸಲು ಸಹಾಯಕರೊಬ್ಬರನ್ನು ಕರೆತರುವ ಅವಕಾಶ ಇದ್ದರೂ ಸಹ , ಸಹಾಯಕರ ಸೂಚಿಸಿದ ಕ್ರಮ ಸಂಖ್ಯೆಯ ಬಟನ್ ಒತ್ತಿ, ತಮ್ಮ ಮತ ಚಲಾಯಿಸುತ್ತಿದ್ದರು.  ಆದರೆ  ತಮ್ಮ ಮತ ತಾವು ಇಚ್ಚಿಸಿದ ಪಕ್ಷ ಅಥವಾ ಅಭ್ಯರ್ಥಿಗೆ ಬಿದ್ದಿರುವ ಕುರಿತು ಸ್ವಯಂ ದೃಢೀಕರಿಸಿಕೊಳ್ಳಲು ಸಾಧ್ಯವಿರಲಿಲ್ಲ, ಆದರೆ ಪ್ರಸ್ತುತ ಚುನಾವಣಾ ಆಯೋಗದ ನಿರ್ದೇಶನದಂತೆ ಅಂಧ ಮತದಾರರಿಗೆ ಅನುಕೂಲವಾಗುವಂತೆ ಬ್ರೈಲ್ ಮಾದರಿ ಮತಪತ್ರವನ್ನು ಸಿದ್ದಪಡಿಸಿದ್ದು, ಈ ಮತಪತ್ರದಲ್ಲಿ ಸಾಮಾನ್ಯ ಮತಪತ್ರದಲ್ಲಿರುವಂತೆ, ಕ್ರ,ಸಂ. ಅಭ್ಯರ್ಥಿಗಳ ಹೆಸರನ್ನು ಬ್ರೈಲ್ ಲಿಪಿಯಲ್ಲಿ  ಸಿದ್ದಪಡಿಸಿದ್ದು, ಎಲ್ಲಾ ಮತಗಟ್ಟೆಗಳಿಗೆ ರವಾನಿಸಲಾಗಿದೆ.

ಮತ ಚಲಾಯಿಸಲು ಬರುವ ಅಂಧ ಮತದಾರರು ಮತಗಟ್ಟೆ ಅಧಿಕಾರಿಯಿಂದ/ ಸ್ವಯಂ ಸೇವಕರಿಂದ  , ಬ್ರೈಲ್ ಮತಪತ್ರವನ್ನು ಪಡೆÀದು , ತಮ್ಮ ಬೆರಳಲ್ಲಿ ಅದರಲ್ಲಿ ನಮೂದಿಸಿರುವ ಸಂಕೇತಾಕ್ಷರಗಳ ಮೂಲಕ ತಮ್ಮ ಆಯ್ಕೆ ಅಭ್ಯರ್ಥಿಯನ್ನು ಗುರುತಿಸಿ, ಮತಯಂತ್ರದಲ್ಲಿ ಅಳವಡಿಸಿರುವ ಬ್ರೈಲ್ ಅಕ್ಷರಗಳ ಕ್ರಮ ಸಂಖ್ಯೆ ಮೂಲಕ ಗುರುತಿಸಿ ಮತ ಚಲಾಯಿಸಬಹುದಾಗಿದೆ.

ಪ್ರತಿ ಜಿಲ್ಲೆಯಲ್ಲಿ ಕಣದಲ್ಲಿರುವ  ಅಭ್ಯರ್ಥಿಗಳ ವಿವರಗಳನ್ನು , ಅಯಾ ಜಿಲ್ಲಾ ಚುನಾವಣಾಧಿಕಾರಿಗಳು  ಸಿದ್ದಪಡಿಸಿ,  ವಿಕಲಚೇತನ ಮತ್ತು ಹಿರಿಯ ನಾಗರೀಕರ ಸಬಲೀಕರಣ ಇಲಾಖೆಯ ನಿದೇರ್ಶನದಂತೆ, ಈ ಬ್ರೈಲ್ ಮತಪತ್ರವನ್ನು , ಸಾಮಾನ್ಯ ಮತಪತ್ರಕ್ಕೆ ತಾಳೆಯಾಗುವ ಬಗ್ಗೆ ಅಂಧ ಶಾಲೆಯ ಪ್ರಾಂಶುಪಾಲರಿಂದ ಪರೀಕ್ಷಿಸಿ, ಖಚಿತಪಡಿಸಿಕೊಂಡು ಆಯಾ ಕ್ಷೇತ್ರದ ಎಲ್ಲಾ ಮತಗಟ್ಟೆಗಳಿಗೆ ತಲುಪಿಸಬೇಕಿದೆ.

ಉಡುಪಿ ಜಿಲ್ಲೆಯಲ್ಲಿ ಈಗಾಗಲೇ  ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಅವರ ನಿರ್ದೇಶನದಂತೆ ಎಲ್ಲಾ ಮತಗಟ್ಟೆ ಅಧಿಕಾರಿಗಳಿಗೆ , ಮಸ್ಟರಿಂಗ್ ದಿನದಂದು ನೀಡಲು ಕ್ರಮ ಕೈಗೊಳ್ಳಲಾಗಿದೆ.

ಈ ಬ್ರೈಲ್ ಮತಮತ್ರದ ನೆರವಿನಿಂದ,  ಅಂಧ ಮತದಾರರು ಮತಯಂತ್ರದ ಬಳಿ ಸಹಾಯಕರ ನೆರವಿಲ್ಲದೇ , ಮತಯಂತ್ರದಲ್ಲಿ ತಾವೇ ಖುದ್ದು ತಮ್ಮ ಇಷ್ಠದ ಅಭ್ಯರ್ಥಿಗೆ ಮತ ಚಲಾಯಿಸುವ ಮೂಲಕ ತಮ್ಮ ಅಮೂಲ್ಯ ಮತವನ್ನು ಖಚಿತಪಡಿಸಿಕೊಳ್ಳಬಹುದಾಗಿದೆ.