ಆಸ್ಟ್ರೋ ಮೋಹನ್ ಅವರ ‘ಉಡುಪಿ ಮಣಿಪಾಲ ಅಂದು ಇಂದು’ ಮಿನಿ ಕಾಫಿ ಟೇಬಲ್ ಕೃತಿ ಬಿಡುಗಡೆ

ಉಡುಪಿ: ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ಜಿಲ್ಲಾ ಘಟಕ, ಉಡುಪಿ ತಾಲೂಕು ಘಟಕದ ಸಹಯೋಗದಲ್ಲಿ ಭೂತರಾಜ ಪಬ್ಲಿಕೇಶನ್ ವತಿಯಿಂದ ಛಾಯಾಚಿತ್ರ ಪತ್ರಕರ್ತ ಆಸ್ಟ್ರೋ ಮೋಹನ್ ಅವರ ‘ಉಡುಪಿ ಮಣಿಪಾಲ ಅಂದು ಇಂದು’ ಮಿನಿ ಕಾಫಿ ಟೇಬಲ್ ಆರನೇ ಕೃತಿ ನಗರದ ಯಕ್ಷಗಾನ ಕಲಾರಂಗದ ಐವೈಸಿ ಸಭಾಂಗಣದಲ್ಲಿ ಲೋಕಾರ್ಪಣೆಗೊಂಡಿತು.

ಕೃತಿ ಲೋಕಾರ್ಪಣೆಗೊಳಿಸಿ ಮಾಹೆಯ ಸಹ ಕುಲಾಧಿಪತಿ ಡಾ. ಎಚ್.ಎಸ್.ಬಲ್ಲಾಳ್ ಮಾತನಾಡಿ, ಐದು ದಶಕಗಳಲ್ಲಿ ಉಡುಪಿ- ಮಣಿಪಾಲದಲ್ಲಿ ಆದಷ್ಟು ಬದಲಾವಣೆ ಬೇರೆ ಯಾವ ಜಿಲ್ಲೆಯಲ್ಲೂ ಆಗಿಲ್ಲ. ಇದರಲ್ಲಿ ಡಾ. ಟಿಎಂಎ ಪೈ ಕೊಡುಗೆಯೂ ಇದೆ. ಶಿಕ್ಷಣ, ಆರೋಗ್ಯ ಸಹಿತ ಎಲ್ಲ ಕ್ಷೇತ್ರದಲ್ಲೂ ಅಭಿವೃದ್ಧಿಯಾಗಿ ಜಾಗತಿಕವಾಗಿ ಖ್ಯಾತಿ ಪಡೆದಿದೆ ಎಂದರು.

ಕಂಬಳ ಕರಾವಳಿಯ ಪ್ರತಿಷ್ಠೆಯ ಸಂಕೇತ. ಮಣಿಪಾಲದಲ್ಲಿ ಕಂಬಳ ಆಯೋಜಿಸಬೇಕೆಂಬ ಆಗ್ರಹವಿದ್ದು, ಮಾಹೆ ಸಹಕಾರ ನೀಡಲಿದೆ.‌ಆಷ್ಟೋ ಮೋಹನ್ ಅವರ ಚಿತ್ರಗಳು ಗುಣಮಟ್ಟಕ್ಕೆ ಹೆಸರುವಾಸಿಯಾಗಿದೆ ಎಂದು ತಿಳಿಸಿದರು. ಮಣಿಪಾಲ ಮೀಡಿಯಾ ನೆಟ್ ವರ್ಕ್ ಲಿಮಿಟೆಡ್‌ನ ಕಾರ್ಯನಿರ್ವಾ ಹಕ ಅಧ್ಯಕ್ಷರಾದ ಟಿ. ಸತೀಶ್‌ ಯು.ಪೈ ಅಧ್ಯಕ್ಷತೆ ವಹಿಸಿ ಶುಭಹಾರೈಸಿದರು.

ಶಾಸಕ ಯಶ್‌ಪಾಲ್ ಸುವರ್ಣ, ಅದಾನಿ ಸಮೂಹದ ಕಾರ್ಯನಿರ್ವಾಹಕ ಅಧ್ಯಕ್ಷ ಕಿಶೋರ್ ಆಳ್ವ, ಹಿರಿಯ ಛಾಯಾಗ್ರಾಹಕ ಯಜ್ಞ ಮಂಗಳೂರು, ಕಸಾಪ ತಾಲೂಕು ಅಧ್ಯಕ್ಷ ರವಿರಾಜ್ ಎಚ್.ಪಿ. ಮಾತನಾಡಿದರು. ಪ್ರಾಧ್ಯಾಪಕಿ ಡಾ. ನಿಕೇತನಾ ಕೃತಿ ಪರಿಚಯಿಸಿದರು. ಭೂತರಾಜ ಪಬ್ಲಿಕೇಶನ್ ಸಂಸ್ಥೆಯ ಪ್ರವೀಣಾ ಮೋಹನ್ ಉಪಸ್ಥಿತರಿದ್ದರು. ಆಸ್ಟ್ರೋ ಮೋಹನ್ ಸ್ವಾಗತಿಸಿದರು, ಪೂರ್ಣಿಮಾ ಜನಾರ್ದನ ನಿರೂಪಿಸಿ, ಜನಾರ್ದನ ಕೊಡವೂರು ವಂದಿಸಿದರು.