ಹೆಬ್ರಿ:ಚಾಣಕ್ಯ ಸಂಸ್ಥೆಯಲ್ಲಿ ಹಾರ್ಮೋನಿಯಂ ತರಗತಿ ಉದ್ಘಾಟನೆ

ಹೆಬ್ರಿ : ಯಾವುದೇ ಕಲೆ ಅನಾವರಣಗೊಳ್ಳಲು ಸೂಕ್ತ ವೇದಿಕೆ ಅವಶ್ಯಕ. ಗ್ರಾಮೀಣ ಪ್ರದೇಶದ ಪ್ರತಿಭೆಗಳನ್ನು ಗುರುತಿಸಿ ಅವರಿಗೆ ತರಬೇತಿ ನೀಡಿ ಅವರಲ್ಲಿ ಅಡಗಿರುವ ಕಲಾಪ್ರತಿಭೆಯನ್ನು ಗುರುತಿಸುವ ಚಾಣಕ್ಯ ಸಂಸ್ಥೆಯ ಕಲಾ ಸೇವೆ ಶ್ಲಾಘನೀಯ ಎಂದು ಸಂಗೀತ ನಿರ್ದೇಶಕ ಹಾಲಾಡಿ ಕೃಷ್ಣ ಕಾಮತ್ ಹೇಳಿದರು.

ಅವರು ಅ. 10ರಂದು ಹೆಬ್ರಿಯಸ್ಸಾರ್ ಬಳಿ ಇರುವ ಚಾಣಕ್ಯ ಎಜುಕೇಶನ್ ಅಂಡ್ ಕಲ್ಚರ್ ಅಕಾಡೆಮಿಯಲ್ಲಿ ಆರಂಭಗೊಂಡ ಹಾರ್ಮೋನಿಯಂ ತರಗತಿಯನ್ನು ಉದ್ಘಾಟಿಸಿ ಮಾತನಾಡಿದರು. ಕಳೆದ ಹತ್ತು ವರ್ಷಗಳಿಂದ ಒಂದೇ ಸೂರಿನಡಿ ಎಲ್ಲಾ ಕಲಾ ಪ್ರಕಾರಗಳನ್ನು ತರಬೇತಿ ನೀಡುವುದರಿಂದ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೇಲ್ವಿಚಾರಕ ಉದಯ್ ಹೇಳಿದರು. ಪ್ರತಿ ಭಾನುವಾರ 4:30 ರಿಂದ 5:30 ತನಕ ಹಾರ್ಮೋನಿಯಂ ತರಗತಿ ನಡೆಯಲಿದ್ದು ಆಸಕ್ತರು ತಮ್ಮ ಹೆಸರನ್ನು ನೋಂದಾಯಿಸಿ ಕೊಳ್ಳಬಹುದೆಂದು ಚಾಣಕ್ಯ ಸಂಸ್ಥೆಯ ಅಧ್ಯಕ್ಷ ಉದಯ ಶೆಟ್ಟಿ ಹೇಳಿದರು.
ಸಮಾರಂಭದಲ್ಲಿ ಚಾಣಕ್ಯ ಸಂಸ್ಥೆಯ ಗೌರವ ಸಲಹೆಗಾರ ನಿತ್ಯಾನಂದ ಭಟ್,ಚಾಣಕ್ಯ ಡ್ಯಾನ್ಸ್ ಇನ್ಸ್ಟಿಟ್ಯೂಟ್ ನ ನೃತ್ಯ ಗುರು ಹರೀಶ್, ಚಾಣಕ್ಯ ಸಂಸ್ಥೆಯ ಪ್ರಾಂಶುಪಾಲೆ ವೀಣಾ ಯು ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.ಸಂಸ್ಥೆಯ ಅಧ್ಯಕ್ಷ ಉದಯ್ ಕುಮಾರ್ ಶೆಟ್ಟಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.