ಹೆಬ್ರಿ ಎಸ್.ಆರ್. ಕಾಲೇಜಿನಲ್ಲಿ ವಾರ್ಷಿಕೋತ್ಸವ,‌ ನೂತನ ಸೆಮಿನಾರ್ ಹಾಲ್ ಉದ್ಘಾಟನೆ.

ಹೆಬ್ರಿ: ಗುಣಮಟ್ಟದ ಶಿಕ್ಷಣ ಗುರಿಮುಟ್ಟಿಸುತ್ತದೆ ಎಂಬ ಧ್ಯೇಯ ವಾಕ್ಯದೊಂದಿಗೆ ಗ್ರಾಮೀಣ ಪ್ರದೇಶವಾದ ಹೆಬ್ರಿಯಲ್ಲಿ ಕಳೆದ 26 ವರ್ಷಗಳಿಂದ ಶಿಸ್ತುಬದ್ಧ ಶಿಕ್ಷಣದ ಮೂಲಕ ಶೈಕ್ಷಣಿಕ ಕ್ರಾಂತಿ ಮೂಡಿಸಿ ರಾಜ್ಯದಾದ್ಯಂತ ವಿದ್ಯಾರ್ಥಿಗಳು ಇತ್ತ ಮುಖ ಮಾಡುವಂತೆ ಮಾಡಿದ ನಾಗರಾಜ ಶೆಟ್ಟಿ ದಂಪತಿಗಳ ಶ್ರಮ ಶ್ಲಾಘನೀಯ ಎಂದು ಸಂಸದ ಕೋಟ ಶ್ರೀನಿವಾಸ್ ಪೂಜಾರಿ ಹೇಳಿದರು.

ಅವರು ಡಿ. 21ರಂದು ಹೆಬ್ರಿಯ ಎಸ್. ಆರ್. ಸಮೂಹ ಶಿಕ್ಷಣ ಸಂಸ್ಥೆಯ 26ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ನೂತನವಾಗಿ ನಿರ್ಮಾಣಗೊಂಡ ಸೆಮಿನಾರ್ ಹಾಲ್ ಉದ್ಘಾಟಿಸಿ ಸಂಸ್ಥೆಯ ಸಾಧಕ ವಿದ್ಯಾರ್ಥಿಗಳನ್ನು ಅಭಿನಂದಿಸಿ ಮಾತನಾಡಿದರು.

ಪೋಷಕರ ನಿರಂತರ ಸಹಕಾರ ಹಾಗೂ ನಮ್ಮ ಸಂಸ್ಥೆಯ ಶಿಕ್ಷಕ ವೃಂದದ ಪರಿಶ್ರಮದಿಂದ ಸಂಸ್ಥೆ ಇಂದು ಆಧುನಿಕ ಸೌಲಭ್ಯದೊಂದಿಗೆ ಸಹಸ್ರಾರು ವಿದ್ಯಾರ್ಥಿಗಳಿಗೆ ಶಿಕ್ಷಣವನ್ನು ನೀಡುತ್ತಿದ್ದು ರಾಜ್ಯ ಮಾತ್ರವಲ್ಲದೆ ಇತರ ಪ್ರದೇಶದಿಂದ ಇಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ ಎಂದು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ ಸಂಸ್ಥೆಯ ಅಧ್ಯಕ್ಷ ಎಚ್. ನಾಗರಾಜ್ ಶೆಟ್ಟಿ ಹೇಳಿದರು.

ಬ್ರಹ್ಮಾವರ ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ನಿತ್ಯಾನಂದ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಜನಾರ್ಧನ, ಪಿ.ವಿ.ಆನಂದ ಸಾಲಿಗ್ರಾಮ, ಸಂತೋಷ ಆರ್ಡಿ ವರ್ಷವಿಡಿ ಕನ್ನಡ ಗೀತಾ ಗಾಯನ ಕಾರ್ಯಕ್ರಮದ ರೂವಾರಿ ಹೆಬ್ರಿ ಉದಯಕುಮಾರ್ ಶೆಟ್ಟಿ ಅವರನ್ನು ಗೌರವಿಸಲಾಯಿತು.

ಸಂಸ್ಥೆ ಟಾಪರ್ ವಿದ್ಯಾರ್ಥಿಗಳನ್ನು ಕ್ರೀಡೆ ಹಾಗೂ ಸಾಂಸ್ಕೃತಿಕ ವಿಭಾಗದಲ್ಲಿ ರಾಜ್ಯ ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ಸಮಾರಂಭದಲ್ಲಿ ಹೆಬ್ರಿ ತಹಶೀಲ್ದಾರ್ ಪ್ರಸಾದ್ ಎಸ್. ಬಿ., ಸಂಸ್ಥೆಯ ಟ್ರಸ್ಟಿ ಡಾ.ಯತಿರಾಜ್ ಶೆಟ್ಟಿ ಮುಖ್ಯ ಶಿಕ್ಷಕ ಗೋಪಾಲ ಆಚಾರ್ಯ ಮೊದಲಾದವರು ಉಪಸ್ಥಿತರಿದ್ದರು.

ಕಾಲೇಜಿನ ಪ್ರಾಂಶುಪಾಲ ಪ್ರಶಾಂತ ವಾರ್ಷಿಕ ವರದಿ ವಾಚಿಸಿದರು. ಸಂಸ್ಥೆಯ ಕಾರ್ಯದರ್ಶಿ ಸಪ್ನಾ ಎನ್. ಶೆಟ್ಟಿ ಸ್ವಾಗತಿಸಿ, ವಿದ್ಯಾರ್ಥಿನಿ ಸೃಷ್ಟಿ ಕಾರ್ಯಕ್ರಮ ನಿರೂಪಿಸಿ, ಎಸ್.ಆರ್. ಪಬ್ಲಿಕ್ ಸ್ಕೂಲ್ ನ ಪ್ರಾಂಶುಪಾಲೆ ಭಗವತಿ ವಂದಿಸಿದರು. ಬಳಿಕ ಆಕರ್ಷಕ ಡಿಜಿಟಲ್ ವರ್ಣರಂಜಿತ ವೇದಿಕೆಯಲ್ಲಿ ಮನಮೋಹಕ ದ್ವನಿ ಬೆಳಕಿನ ಸಂಯೋಜನೆಯಲ್ಲಿ ಶಾಲಾ ವಿದ್ಯಾರ್ಥಿಗಳ ಸಾಂಸ್ಕೃತಿಕ ವೈವಿಧ್ಯ ನಡೆಯಿತು.