ಉಡುಪಿ: ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ವತಿಯಿಂದ ಕರಾವಳಿಯ ಸಾಹಿತಿಗಳು – ಕಲಾವಿದರು – ಲೇಖಕರು – ಕವಿಗಳು – ಚುಟುಕು ಬರಹಗಾರರ ಸಮ್ಮೇಳನವನ್ನು ಸೆ. 29ರಂದು ಉಡುಪಿ ಕುಂಜಿಬೆಟ್ಟುವಿನ ಶಾರದ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿದೆ ಎಂದು ಬಿಜೆಪಿ ಹಿಂದುಳಿದ ಮೋರ್ಚಾದ ಅಧ್ಯಕ್ಷ ವಿಜಯ್ ಕುಮಾರ್ ಕೊಡವೂರು ತಿಳಿಸಿದರು.
ಉಡುಪಿಯಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮ್ಮೇಳನವನ್ನು ಅಂದು ಬೆಳಿಗ್ಗೆ 10ಗಂಟೆಗೆ ಮೈಸೂರು ಸಂಸದ ಯದುವೀರ್ ಒಡೆಯರ್ ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ಹಿಂದುಳಿದ ಮೋರ್ಚಾದ ಅಧ್ಯಕ್ಷ ವಿಜಯ್ ಕುಮಾರ್ ಕೊಡವೂರು ವಹಿಸಲಿದ್ದು, ಬಿಜೆಪಿ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್ ಉಪಸ್ಥಿತರಿರಲಿದ್ದಾರೆ.
ಸಮ್ಮೇಳನದಲ್ಲಿ ಎರಡು ಗೋಷ್ಟಿಗಳು ನಡೆಯಲಿವೆ. 11 ಗಂಟೆಗೆ ಆರಂಭಗೊಳ್ಳುವ ಮೊದಲ ಗೋಷ್ಟಿಯಲ್ಲಿ “ಬದಲಾದ ರಾಜಕಾರಣದಿಂದ ದಮನಗೊಳ್ಳುತ್ತಿರುವ ಹಿಂದೂಗಳ ಬದುಕು – ಸಾಹಿತ್ಯ” ವಿಷಯದ ಕುರಿತಾಗಿ ಬರಹಗಾರ ಪ್ರೇಮ್ ಶೇಖರ್ ಹಾಗೂ ಚಿಂತಕ ದಯಾನಂದ್ ಕತ್ತಲ್ ಸರ್ ಮಾತನಾಡಲಿದ್ದಾರೆ. 12 ಗಂಟೆಗೆ “ಭಯೋತ್ಪಾದನೆಯಲ್ಲಿ ನಲುಗುತ್ತಿರುವ ಹಿಂದುತ್ವ” ವಿಷಯದ ಕುರಿತಾಗಿ ವಾಗ್ಮಿ ಡಾ. ಆರತಿ ಬಿ.ವಿ, ಸಂವೇದನಾ ಫೌಂಡೇಶನ್ ಸಂಸ್ಥಾಪಕ ಪ್ರಕಾಶ್ ಮಲ್ಪೆ ಮಾತನಾಡಲಿದ್ದಾರೆ. ಚಿಕ್ಕಮಗಳೂರಿನ ತನ್ಮಯಿ ಸಮನ್ವಯಕಾರರಾಗಲಿದ್ದಾರೆ. ಮಧ್ಯಾಹ್ನ 1ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ರವೀಂದ್ರ ತಿಂಗಳಾಯ, ಸುರೇಂದ್ರ ಕುಲಾಲ್, ಸುರೇಂದ್ರ, ಭಾರತಿ ಚಂದ್ರಶೇಖರ್, ಅರುಣ್ ಬಾಣ, ಆದರ್ಶ ನಾಯರಿ ಉಪಸ್ಥಿತರಿದ್ದರು.