ಸುಳ್ಯ: ಪಾಷಾಣ ಸೇವಿಸಿ ಅಸ್ವಸ್ಥಗೊಂಡಿದ್ದ ಯುವಕ ಮೃತ್ಯು.

ಮಂಗಳೂರು: ಮದ್ಯಕ್ಕೆ ಇಲಿ ಪಾಷಾಣವನ್ನು ಬೆರೆಸಿ ಕುಡಿದು ಅಸ್ವಸ್ಥಗೊಂಡಿದ್ದ ಯುವಕನೋರ್ವ ಆಸ್ಪತ್ರೆಯಲ್ಲಿ ಮೃತಪಟ್ಟಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದಲ್ಲಿ ನಡೆದಿದೆ.

ಪಾಲ್ತಾಡು ಗ್ರಾಮದ ಚೆನ್ನಾವರ ಪಟ್ಟೆಯ ಮಹಾಬಲ ರೈ ಅವರ ಪುತ್ರ ಹರ್ಷಿತ್‌ ರೈ (29) ಮೃತರು.

ಹರ್ಷಿತ್‌ ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದು, ಸುಮಾರು ವರ್ಷಗಳಿಂದ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ನ. 21ರಂದು ಸಂಜೆ ಹರ್ಷಿತ್‌ ಮನೆಯಲ್ಲಿ ಯಾರೂ ಇಲ್ಲದ ವೇಳೆ ಇಲಿಗೆ ಉಪಯೋಗಿಸುವ ಇಲಿ ಪಾಷಾಣವನ್ನು ಮದ್ಯಕ್ಕೆ ಬೆರೆಸಿ ಕುಡಿದು ಅಸ್ವಸ್ಥಗೊಂಡಿದ್ದರು. ಬಳಿಕ ಆತನನ್ನು ಪುತ್ತೂರಿನ ಆಸ್ಪತ್ರೆಗೆ ಕರೆದುಕೊಂಡು ಹೋಗಿ, ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಚಿಕಿತ್ಸೆಗೆ ಸ್ಪಂದಿಸದೆ ನ.30ರಂದು ಮೃತಪಟ್ಟಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಬೆಳ್ಳಾರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.