ಶ್ರೀ ಶಾರದಾ ಟೀಚರ್ಸ್ ಟ್ರೈನಿಂಗ್ ಸಂಸ್ಥೆ ಮಣಿಪಾಲ: ಶ್ರೀಮತಿ ಸೌಜನ್ಯಾ ಶೆಟ್ಟಿ ಅವರೊಂದಿಗೆ ಸಂವಾದ, ವಿಚಾರ ಸಂಕಿರಣ.

ಮಣಿಪಾಲ: ಮಣಿಪಾಲದ ಶ್ರೀ ಶಾರದಾ ಟೀಚರ್ಸ್ ಟ್ರೈನಿಂಗ್ ಸಂಸ್ಥೆಯ ಆಶ್ರಯದಲ್ಲಿ ಅಲ್ಲಿನ ಪ್ರಶಿಕ್ಷಣಾರ್ಥಿ ಗಳೊಂದಿಗೆ ಉಡುಪಿಯ ಪ್ರತಿಷ್ಠಿತ ಶ್ರೀ ಎ. ವಿ. ಬಾಳಿಗಾ ಆಸ್ಪತ್ರೆಯ ಮುಖ್ಯ ಆಡಳಿತಾಧಿಕಾರಿ ಶ್ರೀಮತಿ ಸೌಜನ್ಯಾ ಶೆಟ್ಟಿ ಅವರು ” ಮಕ್ಕಳ ಮನಸ್ಸಿನ ಭಾವನಾತ್ಮಕ ಸ್ವಾಸ್ಥ್ಯದ ಅಗತ್ಯತೆ”ಯ ಕುರಿತು ನಡೆದ ವಿಚಾರ ಸಂಕಿರಣದಲ್ಲಿ ಭಾಗವಹಿಸಿ ಶಿಕ್ಷಕರು ಮಕ್ಕಳ ನಡೆನುಡಿಯಲ್ಲಿ ಆಗುವ ಬದಲಾವಣೆಗಳನ್ನು ಸೂಕ್ಷ್ಮವಾಗಿ ಅವಲೋಕಿಸಿ ಅವರ ಪೂರ್ಣಪ್ರಮಾಣದ ವ್ಯಕ್ತಿತ್ವವನ್ನು ಬೆಳೆಸಲು ಸಹಕರಿಸಬೇಕು ಎಂದು ತಿಳಿಹೇಳಿದರು. ಅವರ ಮನಸ್ಸು ಎಷ್ಟು ಸೂಕ್ಷ್ಮ ಅಲ್ಲದೇ ನಾವು ನಿರ್ಲಕ್ಷಿಸುವ ಪ್ರತಿಯೊಂದು ಚಿಕ್ಕ ವಿಷಯವೂ ಅವರ ಮನಸ್ಸಿನ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎನ್ನುವುದನ್ನು ತಿಳಿಸಿ ಸಂವಾದದಲ್ಲಿ ಪಾಲ್ಗೊಂಡರು. ಚಿಕ್ಕ ಮಕ್ಕಳ ಮಾನಸಿಕ ಏರುಪೇರುಗಳನ್ನು ಮೊದಲೇ ಗಮನಿಸಿದಲ್ಲಿ ಅವುಗಳನ್ನು ಸರಿಪಡಿಸಬಹುದು ಎಂದೂ ತಿಳಿಸಿದರು.

ಮಕ್ಕಳ ಮಾನಸಿಕ ಅಸ್ವಾಸ್ತ್ಯದ ಬಗ್ಗೆ ಉದಾಹರಣೆಗಳೊಂದಿಗೆ ವಿವರಿಸಿದ ಅವರು ಮಕ್ಕಳನ್ನು ಬೆಳೆಸುವ ವಿಧಿವಿಧಾನಗಳ ಬಗ್ಗೆ ಕ್ಷ ಕಿರಣ ಬೀರಿದರು.

ಕಾರ್ಯಕ್ರಮದಲ್ಲಿ ಪ್ರಾಂಶುಪಾಲೆ ಶ್ರೀಮತಿ ಸುನೀತಾ, ಸಂಪನ್ಮೂಲ ವ್ಯಕ್ತಿಗಳಾದ ಶ್ರೀಮತಿ ಚಂದ್ರಕಲಾ ಮತ್ತು ಶ್ರೀ ಎನ್. ವಿ. ಕಾಮತ್ ಅವರು ಉಪಸ್ಥಿತರಿದ್ದರು.