ಉಡುಪಿ: ಪ್ರಥಮ ಬಾರಿಗೆ ಉಡುಪಿ ಕೃಷ್ಣಮಠದ ಪರ್ಯಾಯ ಪೀಠ ಏರಲಿರುವ ಶೀರೂರು ಮಠಾಧೀಶರಾದ ವೇದವರ್ಧನತೀರ್ಥ ಸ್ವಾಮೀಜಿ ಶುಕ್ರವಾರ ಬಾಳೆ ಮುಹೂರ್ತ ನೆರವೇರಿಸಿದರು.
ಪೂರ್ಣಪ್ರಜ್ಞ ಕಾಲೇಜು ಬಳಿಯಶೀರೂರು ಮಠದ ತೋಟದಲ್ಲಿ ಭಾವಿ ಪರ್ಯಾಯ ಪೀಠಾಧೀಶ ವೇದವರ್ಧನತೀರ್ಥ ಶ್ರೀಪಾದರು ವೇದವಾದ್ಯ ಘೋಷದ ನಡುವೆ ಬಾಳೆ ಸಸಿನೆಟ್ಟರು. ಜೊತೆಗೆ ತುಳಸಿ ಸಸಿ ಹಾಗೂ ಕಬ್ಬಿನ ಕಂದು ನೆಡಲಾಯಿತು. ವಿದ್ವಾನ್ ಗಿರಿರಾಜ ಉಪಾಧ್ಯಾಯ ಕಂಬ್ಳಕಟ್ಟ ಧಾರ್ಮಿಕ ವಿಧಿ ನೆರವೇರಿಸಿದರು. ಶೀರೂರು ಮಠದ ದಿವಾನ ಡಾ. ಉದಯ ಸರಳತ್ತಾಯ, ಶ್ರೀಮಠದ ಪಾರುಪತ್ಯಗಾರ ಶ್ರೀಶ ಭಟ್ ಕಡೆಕಾರ್ ಇದ್ದರು. ಶ್ರೀಮಠದ ಮೇಸ್ತ್ರಿ ಪದ್ಮನಾಭ ಸಹಕರಿಸಿದರು.
ಬೆಳಿಗ್ಗೆ 5.30ಕ್ಕೆ ಶೀರೂರು ಮಠದ ಉಪಾಸ್ಯದೇವರಾದ ಶ್ರೀವಿಠಲದೇವರ ಸನ್ನಿಧಾನದಲ್ಲಿ ಫಲನ್ಯಾಸಪೂರ್ವಕ ಪ್ರಾರ್ಥನೆ ಸಲ್ಲಿಸಿ, ಶ್ರೀ ಅನಂತೇಶ್ವರ- ಚಂದ್ರೇಶ್ವರ, ಕೃಷ್ಣ ಮುಖ್ಯಪ್ರಾಣ ಹಾಗೂ ವೃಂದಾವನ ದರ್ಶನಗೈದು ಪ್ರಾರ್ಥನೆ ಸಲ್ಲಿಸಿ ಮರಳಿ ಶೀರೂರು ಮಠಕ್ಕಾಗಮಿಸಲಾಯಿತು.
ಶೀರೂರು ಮಠದಿಂದ ಪಿಪಿಸಿ ಬಳಿಯ ತೋಟದವರೆಗೆ ಬಾಳೆ ಸಸಿಗಳೊಂದಿಗೆ ವೇದ- ವಾದ್ಯ ಘೋಷ, ಭಜನೆಯೊಂದಿಗೆ ಮೆರವಣಿಗೆಯಲ್ಲಿ ತೆರಳಲಾಯಿತು.
ಮುಹೂರ್ತ ನೆರವೇರಿಸಿ ಆಶೀರ್ವಚನ ನೀಡಿದ ಶ್ರೀ ವೇದವರ್ಧನತೀರ್ಥ ಶ್ರೀಪಾದರು, 2026ರ ಜ.18ರಿಂದ ಎರಡು ವರ್ಷ ಕಾಲದ ತಮ್ಮ ಪ್ರಥಮ ಪರ್ಯಾಯ ಅವಧಿಯಲ್ಲಿ ಅನ್ನದಾನಕ್ಕೆ ಆದ್ಯತೆ ನೀಡಲಾಗುವುದು. ಕೃಷ್ಣ ದರ್ಶನಕ್ಕೆ ಆಗಮಿಸುವ ಎಲ್ಲ ಭಕ್ತರಿಗೂ ಏಕರೂಪದ ಪ್ರಸಾದ ಲಭಿಸುವಂತೆ ವ್ಯವಸ್ಥೆ ಮಾಡಲಾಗುವುದು.
ಅಂತೆಯೇ ಕೃಷ್ಣ ಸನ್ನಿಧಿಯಲ್ಲಿ ಪೂಜೆ, ಪ್ರವಚನ ಇತ್ಯಾದಿಗಳ ನಡುವೆಯೇ ಚತುರ್ವೇದ ಪಾರಾಯಣ, ವೇದ ಪಾಠ ನಡೆಸಲು ಉದ್ದೇಶಿಸಲಾಗಿದೆ ಎಂದರು.
ಮಠದ ದಿವಾನ ಡಾ. ಉದಯ ಸರಳತ್ತಾಯ, ಪರ್ಯಾಯ ಸಂದರ್ಭದಲ್ಲಿ ಬಾಳೆ ಎಲೆಗಾಗಿ ಬಾಳೆತೋಟ ನಿರ್ಮಿಸುವ, ಬಾಳೆ ಎಲೆಯಲ್ಲಿ ಕೃಷ್ಣನಿಗೆ ನೈವೇದ್ಯ ಸಮರ್ಪಿಸಿ ಅದನ್ನು ಪ್ರಸಾದ ರೂಪವಾಗಿ ಭಕ್ತರಿಗೆ ವಿತರಿಸುವ ಆಶಯ ಬಾಳೆ ಮುಹೂರ್ತ ಹೊಂದಿದೆ ಎಂದರು.
ಈ ಸಂದರ್ಭದಲ್ಲಿ ಕಟೀಲು ಲಕ್ಷ್ಮೀನಾರಾಯಣ ಆಸ್ರಣ್ಣ, ಗೋಪಾಲಕೃಷ್ಣ ಆಸ್ರಣ್ಣ, ಶಾಸಕ ಯಶಪಾಲ್ ಸುವರ್ಣ, ಮಾಜಿ ಶಾಸಕ ರಘುಪತಿ ಭಟ್, ಕಸಾಪ ಮಾಜಿ ರಾಜ್ಯಾಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು, ಕಿನ್ನಿಗೋಳಿ ಭುವನಾಭಿರಾಮ ಉಡುಪ, ಶ್ರೀಪತಿ ಭಟ್ ಮೂಡುಬಿದಿರೆ, ದ.ಕ. ಕಸಾಪ ಮಾಜಿ ಅಧ್ಯಕ್ಷ ಪ್ರದೀಪಕುಮಾರ್ ಕಲ್ಕೂರ, ನಗರಸಭಾಧ್ಯಕ್ಷ ಪ್ರಭಾಕರ ಪೂಜಾರಿ, ಉಪಾಧ್ಯಕ್ಷೆ ರಜನಿ ಹೆಬ್ಬಾರ್, ಸದಸ್ಯೆ ಅಮೃತಾ ಕೃಷ್ಣಮೂರ್ತಿ, ಪ್ರಮುಖರಾದ ಮೋಹನ ಭಟ್, ವಾಸುದೇವ ಆಚಾರ್ಯ, ಶ್ರೀಕಾಂತ ನಾಯಕ್, ಗೋವಿಂದ ಭಟ್, ಕಿನ್ನಿಮೂಲ್ಕಿ ಕೃಷ್ಣಮೂರ್ತಿ ಆಚಾರ್ಯ, ಡಾ. ಕೃಷ್ಣಪ್ರಸಾದ್, ಪ್ರಸಾದ್ ರಾಜ್ ಕಾಂಚನ್, ಪುತ್ತಿಗೆ ಮಠ ಕೊಠಾರಿ ರಾಮಚಂದ್ರ ಕೊಡಂಚ, ಪೇಜಾವರ ಮಠ ದಿವಾನ ರಘುರಾಮ ಆಚಾರ್ಯ ಮತ್ತು ಸಿಇಓ ಸುಬ್ರಹ್ಮಣ್ಯ ಸಾಮಗ ಮೊದಲಾದವರಿದ್ದರು.