ಶಿರೂರು ಗುಡ್ಡ ಕುಸಿತ ಪ್ರಕರಣ: ನಾಪತ್ತೆಯಾಗಿದ್ದ ಕೇರಳದ ಲಾರಿ ಚಾಲಕ ಅರ್ಜುನ್ ಮೃತದೇಹ ಪತ್ತೆ

ಅಂಕೋಲಾ: ಶಿರೂರು ಗುಡ್ಡ ಕುಸಿತ ದುರಂತ ಸಂಭವಿಸಿ ಎರಡು ತಿಂಗಳು ಕಳೆದಿದ್ದು, ಕೊನೆಗೂ ನಾಪತ್ತೆಯಾಗಿದ್ದ ಕೇರಳದ ಲಾರಿ ಹಾಗೂ ಚಾಲಕ ಅರ್ಜುನ್‌ ಅವರ ಮೃತದೇಹ ಬುಧವಾರ(ಸೆ.25ರಂದು) ಪತ್ತೆ ಆಗಿದೆ ಎಂದು ವರದಿಯಾಗಿದೆ.

ಕಳೆದ 6 ದಿನಗಳಿಂದ ನಡೆಯುತ್ತಿದ್ದ ಕಾರ್ಯಾಚರಣೆಯ ಮೂಲಕ ಗಂಗಾವಳಿ ನದಿಯಲ್ಲಿ ಮುಳುಗಿದ್ದ ಅರ್ಜುನ್‌ ಅವರ ಬೆಂಜ್ ಲಾರಿ ಪತ್ತೆಯಾಗಿದ್ದು, ಲಾರಿಯೊಳಗೆ ಅರ್ಜುನ್‌ ಅವರ ಮೃತದೇಹ ಪತ್ತೆಯಾಗಿದೆ ಎಂದು ಕಾರ್ಯಾಚರಣೆಯ ತಂಡದ ಮೂಲಗಳು ತಿಳಿಸಿವೆ.

ಲಾರಿಯ ಮಾಲೀಕ ಮನಾಫ್‌ ಅವರು ಇದು ತಮ್ಮದೆ ಲಾರಿಯೆಂದು ಗುರುತಿಸಿದ್ದು, ಲಾರಿಯೊಳಗೆ ಮೃತದೇಹ ಪತ್ತೆಯಾಗಿದೆ. ಇದು ಅರ್ಜುನ್‌ ಅವರ ಮೃತದೇಹವೆಂದು ಸ್ಪಷ್ಟಪಡಿಸಿರುವುದಾಗಿ ವರದಿ ವಿವರಿಸಿದೆ.‌
ಇವರ ಜೊತೆ ಸ್ಥಳೀಯ ಜಗನ್ನಾಥ ಮತ್ತು ಲೋಕೇಶ್ ಕಣ್ಮರೆಯಾಗಿದ್ದಾರೆ ಆಗಿದ್ದು ಅವರ ಶೋಧ ಕಾರ್ಯ ಮುಂದುವರೆದಿದೆ ಎಂದು ವರದಿಯಾಗಿದೆ.