ಸುರತ್ಕಲ್: ಅಂಕೋಲಾ ತಾಲೂಕಿನ ಶಿರೂರಿನಲ್ಲಿ ಭೂ ಕುಸಿತ ಸಂಭವಿಸಿ ನದಿ ಪಾಲಾಗಿದ್ದ ಎಲ್ಪಿಜಿ ಗ್ಯಾಸ್ ಟ್ಯಾಂಕರ್ನ ಅನಿಲ ಸೋರಿಕೆಯನ್ನು ಸುರತ್ಕಲ್ ಎಚ್ಪಿಸಿಎಲ್ ಸ್ಥಾವರದ ಗುತ್ತಿಗೆ ಸಿಬಂದಿಗಳು ಜೀವ ಪಣಕ್ಕಿಟ್ಟು ನಿಭಾಯಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮಂಗಳೂರು ಎಚ್ಪಿಸಿಎಲ್ ಕಂಪೆನಿಯ ಗುತ್ತಿಗೆಯ ಎಸ್ ಪಿ ಎಂಜಿನಿಯರಿಂಗ್ ವರ್ಕ್ಸ್ ನ ಕಾರ್ಮಿಕರು ಎನ್ಡಿಆರ್ಎಫ್, ನೌಕಾ ದಳ ಹಾಗೂ ಅಗ್ನಿಶಾಮಕ ಸಿಬಂದಿ ಜತೆ ಸೇರಿ ಅನಿಲವನ್ನು ಖಾಲಿ ಮಾಡಿದ್ದಾರೆ. ಬಾಳ ಗ್ರಾಮದ ಸಂಕೇತ ಪೂಜಾರಿ, ಕುಳಾಯಿಗುಡ್ಡೆ ನಿವಾಸಿ ಮನೋಜ್, ಜನತಾ ಕಾಲನಿಯ ರತನ್, ಕಾವೂರಿನ ಸಂತೋಷ್ ಅವರು ನೇರ ಕಾರ್ಯಾಚರಣೆ ಕೈಗೊಂಡವರು. ಎಚ್ಪಿಸಿಎಲ್ ಸಂಸ್ಥೆಯ ಸುರಕ್ಷಾ ಅಧಿಕಾರಿ ಶಿವರಾಜ್ ಚೌಹಾಣ್ ಮಾರ್ಗದರ್ಶನ ನೀಡಿದರು.
ಸುರಕ್ಷಾ ಕ್ರಮದಿಂದ ಸೋರಿಕೆ ತಡೆಗಟ್ಟಲಾಯಿತು:
ನೀರಲ್ಲಿ ಟ್ಯಾಂಕರ್ ಕೊಚ್ಚಿಕೊಂಡು ಹೋಗುವ ಸಂದರ್ಭ ಅದರ ಹಿಂಭಾಗದಲ್ಲಿರುವ ಮೀಟರ್ಗೆಜ್ಗೆ ಹಾನಿಯಾಗಿ ಸೋರಿಕೆ ಆರಂಭವಾಗಿತ್ತು. ಸೋರಿಕೆ ತಡೆಯುವುದು ಮೊದಲ ಸವಾಲಾಗಿತ್ತು. ಕಿಡಿ ಹೊತ್ತಿ ಅಪಾಯವಾಗದಂತೆ ಯಾವುದೇ ಕಬ್ಬಿಣದ ಆಯುಧ ಬಳಸದೆ ಕೇವಲ ಮರದ ರೀಪು ಸಹಿತ ಸುರಕ್ಷಾ ಕ್ರಮ ತೆಗೆದುಕೊಂಡು ಸೋರಿಕೆ ತಡೆಗಟ್ಟಲಾಯಿತು. ಬಳಿಕ ಅಗ್ನಿಶಾಮಕ, ಎನ್ಡಿಆರ್ಎಫ್ ತಂಡದೊಂದಿಗೆ ತೆರಳಿ ಇಂಧನ ಖಾಲಿ ಮಾಡಲು ಯತ್ನ ನಡೆಯಿತಾದರೂ ಟ್ಯಾಂಕರ್ ನೀರಿನ ರಭಸಕ್ಕೆ ಓಲಾಡುತ್ತಿದ್ದರಿಂದ ಸಾಧ್ಯವಾಗಲಿಲ್ಲ. ಬಳಿಕ ದಡದವರೆಗೆ ಎಳೆಯಲು ಸಿದ್ಧತೆ ನಡೆಸಿ, ನೀರಿನಲ್ಲಿಯೇ ಇಂಧನ ಖಾಲಿ ಮಾಡಲಾಯಿತು. ಶುಕ್ರವಾರ ಸಂಜೆ 6ರವರೆಗೆ ಕಾರ್ಯಾಚರಣೆ ನಡೆದಿತ್ತು.