ಉಡುಪಿ: ಚಂಪಾ ಷಷ್ಠಿಯ ಪ್ರಯುಕ್ತ ಇಲ್ಲಿನ ಶ್ರೀಕೃಷ್ಣಮಠದ ಸುಬ್ರಹ್ಮಣ್ಯ ಗುಡಿಯ ಆವರಣದಲ್ಲಿ
ಮಡೆಸ್ನಾನದ ಬದಲಾಗಿ ನೆರವೇರಿಸಿಕೊಂಡು ಬರಲಾಗುತ್ತಿದ್ದ ಎಡೆಸ್ನಾನ ಪದ್ಧತಿಗೆ ಪರ್ಯಾಯ ಪಲಿಮಾರು ಮಠದ ವಿದ್ಯಾಧೀಶ ಸ್ವಾಮೀಜಿ ತೆರೆ ಎಳೆದಿದ್ದಾರೆ.
ಇಲ್ಲಿನ ಸುಬ್ರಹ್ಮಣ್ಯ ಗುಡಿ ಹಾಗೂ ಪೇಜಾವರ ಮಠದ ಆಡಳಿತಕ್ಕೊಳಪಟ್ಟ ಮುಚ್ಲುಕೋಡು ಸುಬ್ರಹ್ಮಣ್ಯ ಮಠದಲ್ಲಿ ಕೆಲ ವರ್ಷಗಳ ಹಿಂದೆ ಮಡೆಸ್ನಾನ ಪದ್ಧತಿಯನ್ನು ನಡೆಸಿಕೊಂಡು ಬರಲಾಗುತ್ತಿತ್ತು. ಆದರೆ ತಿನ್ನುವ ಅನ್ನದ ಮೇಲೆ ಉರುಳು ಸೇವೆ ಕೆಲವರಿಗೆ ಇಷ್ಟವಿಲ್ಲದ ಕಾರಣದಿಂದ ಹಾಗೂ ಈ ಪದ್ದತಿ ವಿವಾದದ ಸ್ವರೂಪ ಪಡೆದ ಹಿನ್ನೆಲೆಯಲ್ಲಿ ಪೇಜಾವರ ಶ್ರೀಗಳ ಸಲಹೆಯಂತೆ ಕೈಬಿಡಲಾಗಿತ್ತು. ಮಡೆಸ್ನಾನದ ಬದಲು ಎಡೆಸ್ನಾನ (ದೇವರಿಗೆ ಅರ್ಪಿಸುವ ನೈವೀಧ್ಯದ ಎಲೆಯ ಮೇಲೆ ಉರಳು ಸೇವೆ) ಆಚರಿಸಿಕೊಂಡು ಬರಲಾಗುತ್ತಿತ್ತು.
ಪ್ರಸ್ತುತ ಎಡೆಸ್ನಾನದಿಂದಲೂ ಕೆಲವರಿಗೆ ಬೇಸರ ಉಂಟಾಗಿದೆ. ಹಾಗಾಗಿ ಅನಗತ್ಯ ವಿವಾದ ಬೇಡವೆಂಬ ನಿಟ್ಟಿನಿಂದ ಈ ಪದ್ದತಿಯನ್ನು ನಿಲ್ಲಿಸಿದ್ದೇವೆ ಎಂದು ವಿದ್ಯಾಧೀಶ ಶ್ರೀಪಾದರು ಹೇಳಿದ್ದಾರೆ. ಆ ಮೂಲಕ ಶ್ರೀಪಾದರು ಮಹತ್ವದ ನಿರ್ಧಾರವನ್ನು ಕೈಗೊಂಡಿದ್ದಾರೆ.
ಆಸಕ್ತ ಭಕ್ತರಿಂದ ಈ ಬಾರಿ ಕೇವಲ ಉರುಳುಸೇವೆ ನಡೆಯಿತು. ನಂತರ ಶ್ರೀಕೃಷ್ಣಮಠದ ಭೋಜನ ಶಾಲೆಯಲ್ಲಿ ಭಕ್ತರಿಗೆ ಪ್ರಸಾದ ವಿತರಿಸಲಾಯಿತು.