ರಿಷಬ್ ಶೆಟ್ಟಿಯವರ ಕಾಂತಾರ ಚಾಪ್ಟರ್​-1 ಚಿತ್ರಕ್ಕೆ ವಿಘ್ನ, ಚಿತ್ರ ಕಲಾವಿದರಿದ್ದ ಬಸ್ ಪಲ್ಟಿ; 6 ಮಂದಿಗೆ ಗಂಭೀರ ಗಾಯ..!

ಉಡುಪಿ:ರಿಷಬ್ ಶೆಟ್ಟಿ ಅಭಿನಯ ಮತ್ತು ನಿರ್ದೇಶನದ ಕಾಂತಾರ ಸಿನಿಮಾ ಕಲಾವಿದರಿದ್ದ ಬಸ್ ಒಂದು ಪಲ್ಟಿಯಾಗಿದ್ದು, ಆರು ಮಂದಿ ಗಂಭೀರ ಗಾಯಗೊಂಡಿದ್ದಾರೆ. ಬಸ್​ ಪಲ್ಟಿ ಆಗಿದ್ದರಿಂದ ಚಿತ್ರತಂಡದಲ್ಲಿ ಬೇಸರ ಆವರಿಸಿದೆ.

ಉಡುಪಿ ಜಿಲ್ಲೆಯ ಕುಂದಾಪುರದ ಮುದೂರಿನಲ್ಲಿ ಚಿತ್ರೀಕರಣ ಮುಗಿಸಿ ತೆರಳುವಾಗ ಕೊಲ್ಲೂರು ಮಾರ್ಗದಲ್ಲಿ 25 ಕಲಾವಿದರಿದ್ದ ಬಸ್ ಅಪಘಾತವಾಗಿದೆ. ಬಸ್ ಪಲ್ಟಿ ಆಗಿ ಹಲವರಿಗೆ ಗಾಯವಾಗಿದ್ದು ಆರು ಜನರಿಗೆ ಗಂಭೀರ ಗಾಯಗಳಾಗಿದ್ದು, ಕುಂದಾಪುರ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸ್ಥಳಕ್ಕೆ ಕೊಲ್ಲೂರು ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

ಕರಾವಳಿ ಭಾಗದ ಬೇರೆ ಬೇರೆ ಕಡೆಗಳಲ್ಲಿ ‘ಕಾಂತಾರ ಚಾಪ್ಟರ್​ 1’ ಸಿನಿಮಾಗೆ ಶೂಟಿಂಗ್ ಮಾಡಲಾಗುತ್ತಿದೆ. ವಿವಿಧ ಕಲಾವಿದರು ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಮುದೂರಿನಲ್ಲಿ ಚಿತ್ರೀಕರಣ ಮುಗಿಸಿ ಕಲಾವಿದರು ಕೊಲ್ಲೂರಿಗೆ ಹೋಗುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ. ‘ಹೊಂಬಾಳೆ ಫಿಲ್ಮ್ಸ್​’ ಮೂಲಕ ವಿಜಯ್ ಕಿರಗಂದೂರು ಅವರು ‘ಕಾಂತಾರ: ಚಾಪ್ಟರ್​ 1’ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ರಿಷಬ್​ ಶೆಟ್ಟಿ ಅವರು ನಿರ್ದೇಶನ ಮಾಡುವುದರ ಜೊತೆಗೆ ಮುಖ್ಯ ಭೂಮಿಕೆಯಲ್ಲೂ ನಟಿಸುತ್ತಿದ್ದಾರೆ. ‘ಕಾಂತಾರ’ ಚಿತ್ರದ ಪ್ರೀಕ್ವೆಲ್​ ಆಗಿ ‘ಕಾಂತಾರ: ಚಾಪ್ಟರ್​ 1’ ಸಿನಿಮಾ ಮೂಡಿಬರುತ್ತಿದೆ. ಬಸ್​ ಪಲ್ಟಿ ಆಗಿದ್ದರಿಂದ ಚಿತ್ರತಂಡದಲ್ಲಿ ಬೇಸರ ಆವರಿಸಿದೆ.