ಉಡುಪಿ: ಮನುಷ್ಯ ಆರೋಗ್ಯಕರವಾಗಿರ ಬೇಕಾದರೆ ಉತ್ತಮ ಆಹಾರ ಪದ್ಧತಿಯ ಜೊತೆಗೆ ದೈಹಿಕ ವ್ಯಾಯಾಮದ ಅಗತ್ಯವೂ ಇದೆ. ವಿದ್ಯಾರ್ಥಿಗಳು ತಮ್ಮನ್ನು ಬೇರೆ ಬೇರೆ ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳುವುದರಿಂದ ಉತ್ತಮ ಆರೋಗ್ಯವನ್ನು ಪಡೆಯಬಹುದು. ಕ್ರೀಡೆಯಿಂದ ದೇಹಕ್ಕೆ ಒಳ್ಳೆಯ ವ್ಯಾಯಾಮ ಸಿಗುವುದರ ಜೊತೆಗೆ ಕೊಲೆಸ್ಟ್ರಾಲ್ ಸಮಸ್ಯೆ, ರಕ್ತದ ಒತ್ತಡ, ಉದಾಸೀನತೆಯಂತಹ ಸಮಸ್ಯೆಯನ್ನು ಹೋಗಲಾಡಿಸಿ, ವಿದ್ಯಾರ್ಥಿಗಳಲ್ಲಿ ಉತ್ತಮ ಯೋಚನೆ ಮತ್ತು ಕ್ರೀಯಾಶೀಲತೆಯನ್ನು ಹೆಚ್ಚಿಸುತ್ತದೆ ಎಂದು ಜಿಲ್ಲೆಯ ಮಾನ್ಯ ಶಾಸಕರಾದ ಶ್ರೀ.ಯಶ್ಪಾಲ್ ಸುವರ್ಣ ಅಭಿಪ್ರಾಯ ಪಟ್ಟರು.
ಇವರು ಜಿಲ್ಲೆಯ ಡಾ. ಜಿ. ಶಂಕರ್ ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ಅಜ್ಜರಕಾಡು, ಜಿಲ್ಲಾ ಅಮೆಚೂರ್ ಅಥ್ಲೆಟಿಕ್ ಅಸೋಸಿಯೇಷನ್, ಲಯನ್ಸ್ ಕ್ಲಬ್ ಮಿಡ್ಟೌನ್, ತೆಂಕನಿಡಿಯೂರ್ ಸ್ಪೋಟ್ಸ್ ಕ್ಲಬ್, ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಕುಂದಾಪುರ, ಕಾಲೇಜಿನ ದೈಹಿಕ ಶಿಕ್ಷಣ ವಿಭಾಗ, ರೇಂಜರ್ಸ್, ರಾಷ್ಟ್ರೀಯ ಸೇವಾ ಯೋಜನೆ ಮತ್ತು ರೆಡ್ ಕ್ರಾಸ್ ವಿಭಾಗಗಳ ಸಹಯೋಗದೊಂದಿಗೆ ಕಾಲೇಜಿನ ಪಿ.ಜಿ, ಎ.ವಿ ಹಾಲ್ನಲ್ಲಿ ಆಯೋಜಿಸಲಾದ ರಾಷ್ಟ್ರೀಯ ಕ್ರೀಡಾ ದಿನಾಚರಣೆ ಮತ್ತು ಬೃಹತ್ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಎಸ್ ಜಯಕರ ಶೆಟ್ಟಿ, ಅಧ್ಯಕ್ಷರು ಭಾರತೀಯ ರೆಡ್ ಕ್ರಾಸ್ ಸೊಸೈಟಿ ಕುಂದಾಪುರ ಇವರು ಮಾತನಾಡಿ ಜೀವ ಜಲವಾದ ರಕ್ತವನ್ನು ದಾನ ಮಾಡುವುದು ಅತ್ಯಂತ ಪುಣ್ಯದ ಮತ್ತು ಹೆಮ್ಮೆಯ ಕಾರ್ಯವಾಗಿದೆ. ಸ್ವಯಂ ಪ್ರೇರಿತ ರಕ್ತದಾನ ಸಮಾಜ ಸೇವೆಯ ಕೆಲಸ. ಹಲವು ಸಂಘ ಸಂಸ್ಥೆಗಳು ರಕ್ತದಾನ ಶಿಬಿರಗಳನ್ನು ಆಯೋಜಿಸಿ ಉತ್ತಮ ಮಟ್ಟದಲ್ಲಿ ರಕ್ತ ನಿಧಿಯನ್ನು ಸಂಗ್ರಹಿಸುತ್ತಿವೆಯಾದರು ಇಂದಿಗೂ ಅನೇಕರು ಬೇರೆ ಬೇರೆ ಕಾರಣಗಳಿಂದ ಸರಿಯಾದ ಸಮಯಕ್ಕೆ ರಕ್ತದ ಪೂರೈಕೆ ಆಗದೆ ಮರಣ ಹೊಂದುತ್ತಿರುವುದನ್ನು ಕಾಣಬಹುದಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಕ್ರೀಡಾ ಕ್ಷೇತ್ರಕ್ಕೆ ನೀಡಿದ ಅಮೋಘ ಸೇವೆಯನ್ನು ಗುರುತಿಸಿ ಶ್ರೀ. ಹರಿಪ್ರಸಾದ್ ರೈ, ಅಧ್ಯಕ್ಷರು, ಉಡುಪಿ ಜಿಲ್ಲಾ ಅಮೆಚೂರ್ ಅಥ್ಲೆಟಿಕ್ ಅಸೋಸಿಯೇಷನ್ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು. ರಕ್ತದಾನ ಶಿಬಿರದಲ್ಲಿ ಕಾಲೇಜು ವಿದ್ಯಾರ್ಥಿನಿಯರು, ಹಳೆ ವಿದ್ಯಾರ್ಥಿಗಳು, ಉಪನ್ಯಾಸಕರು ಮತ್ತು ತೆಂಕನಿಡಿಯೂರು ಸ್ಪೋರ್ಟ್ಸ್ ಕ್ಲಬ್ನ ಸದಸ್ಯರು ಸೇರಿ ರಕ್ತದಾನವನ್ನು ಮಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿ ಪ್ರಾಂಶುಪಾಲರಾದ ಪ್ರೊ. ಭಾಸ್ಕರ್ ಶೆಟ್ಟಿ ಎಸ್ ವಹಿಸಿದ್ದರು. ವೇದಿಕೆಯಲ್ಲಿ ಅನಂತ್ ಶೆಟ್ಟಿ ಉಡುಪಿ ವಲಯ ಅಧ್ಯಕ್ಷಕರು ಲಯನ್ಸ್ ಕ್ಲಬ್ ಮಿಡ್ಟೌನ್ ಮತ್ತು ಸುಶಾನ್ ಶೆಟ್ಟಿ ಅಧ್ಯಕ್ಷರು ತೆಂಕನಿಡಿಯೂರು ಸ್ಪೋಟ್ಸ್ ಕ್ಲಬ್, ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕದ ಯೋಜನಾಧಿಕಾರಿಯಾದ ಶ್ರೀಮತಿ ವಿದ್ಯಾ ಡಿ ಇವರು ಉಪಸ್ಥಿತರಿದ್ದರು.
ಕಾಲೇಜಿನ ಮಾನವಿಕ ವಿಭಾಗದ ಡೀನ್ ಪ್ರೊ. ನಿಕೇತನ ಸ್ವಾಗತಿಸಿ, ದೈಹಿಕ ಶಿಕ್ಷಣ ನಿರ್ದೇಶಕರು ಡಾ. ರಾಮಚಂದ್ರ ಪಾಟ್ಕರ್ ಕಾರ್ಯಕ್ರಮವನ್ನು ನಿರೂಪಿಸಿದರು. ಮಣಿಪಾಲ ಪದವಿ ಪೂರ್ವ ಕಾಲೇಜಿನ ದೈಹಿಕ ಶಿಕ್ಷಕರಾದ ದಿನೇಶ್ ಶೆಟ್ಟಿ ವಂದಿಸಿದರು.