ಕಾರ್ಕಳ,ಅ.30: ಇಂತಹ ಸ್ಪರ್ಧೆಗಳನ್ನ ಆಯೋಜನೆ ಮಾಡುವುದರಿಂದ ಪ್ರತಿಭೆಗಳು ಅನಾವರಣಗೊಳ್ಳಲು ಅನುಕೂಲವಾಗುತ್ತದೆ. ಈ ನಿಟ್ಟಿನಲ್ಲಿ ಚಾಣಕ್ಯ ಸಂಸ್ಥೆ ಗ್ರಾಮೀಣ ಪ್ರತಿಭೆಗಳಿಗೆ ಅವಕಾಶ ಕಲ್ಪಿಸುತ್ತಿರುವುದು ಶ್ಲಾಘನೀಯ ಎಂದು ಉಡುಪಿ ಮಹಾಗಣಪತಿ ಸೌಹಾರ್ದ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಪ್ರಸಾದ್ ರೈ ಹೇಳಿದರು.
ಅವರು ಕಾರ್ಕಳ ಮೈ-ಟೆಕ್ ಐಟಿಐ ಕಾಲೇಜಿನಲ್ಲಿ ಹೆಬ್ರಿಯ ಚಾಣಕ್ಯ ಇನ್ಸ್ಟಿಟ್ಯೂಟ್ ಆಪ್ ಮ್ಯೂಸಿಕ್ ಇವರ ನೇತೃತ್ವದಲ್ಲಿ ಮುನಿಯಾಲು ಉದಯ ಕೃಷ್ಣ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ಸಹಯೋಗದೊಂದಿಗೆ ನಡೆಯುವ ವಾಯ್ಸ್ ಆಪ್ ಚಾಣಕ್ಯ -2024 ರಾಜ್ಯ ಮಟ್ಟದ ಸಂಗೀತ ಸ್ಪರ್ಧೆಯ ಬಗ್ಗೆ ಮೈಟೆಕ್ ತಾಂತ್ರಿಕ ಶಿಕ್ಷಣ ಸಂಸ್ಥೆ ಕಾರ್ಕಳ ಇವರ ಸಹಕಾರದೊಂದಿಗೆ ನಡೆದ ಆಯ್ಕೆ ಪ್ರಕ್ರಿಯೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ ಹೈಟೆಕ್ ತಾಂತ್ರಿಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಉದಯ ಆಚಾರ್ಯ ಪಳ್ಳಿ ಮಾತನಾಡಿ ಕಳೆದ ಏಳು ವರ್ಷಗಳಿಂದ ಸಂಗೀತ ಸ್ಪರ್ಧೆಯನ್ನು ಆಯೋಜಿಸುವುದರ ಮೂಲಕ ಅದೆಷ್ಟು ಗ್ರಾಮೀಣ ಹಾಡುವ ಪ್ರತಿಭೆಗಳು ಬೆಳಕಿಗೆ ಬಂದಿದೆ ಎಂದರು.
ಸಮಾರಂಭದಲ್ಲಿ ಸಂಗೀತ ಗುರು ಸ್ಮಿತಾ ಭಟ್, ಸಂಗೀತ ನಿರ್ದೇಶಕ ರಮೇಶ್ ಡಿ ಚಾಂತರು, ಮೈ ಟೆಕ್ ಸಂಸ್ಥೆಯ ಸಂಚಾಲಕಿ ರೇಷ್ಮಾ ಉದಯ್, ಸುನಿತಾ ಶೆಟ್ಟಿ ಅಂಡಾರು, ಪ್ರಸನ್ನ ಮುನಿಯಾಲು, ಬಾಲಚಂದ್ರ ಮುದ್ರಾಡಿ ಮೊದಲಾದವರು ಉಪಸ್ಥಿತರಿದ್ದರು.
ಚಾಣಕ್ಯ ಎಜುಕೇಶನ್ ಅಕಾಡಮಿಯ ಅಧ್ಯಕ್ಷ ಉದಯಕುಮಾರ್ ಶೆಟ್ಟಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.